ತುಮಕೂರು: ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಾಗಿರುವ ಸಂಬಳ, ರಜೆ ನಗದೀಕರಣ, ಕಾರ್ಮಿಕರ ಭವಿಷ್ಯ ನಿಧಿ ಹಣ ನೀಡುವಂತೆ ಒತ್ತಾಯಿಸಿ ಕಣ್ವ ಕಾರ್ಮಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರು ಪ್ರತಿಭಟಿಸಿದರು.
ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಅಜಯ್ ಅವರಿಗೆ ಮಹಿಳಾ ಕಾರ್ಮಿಕರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಉಪವಿಭಾಗಾಧಿಕಾರಿ ಮುಂದಿನ 15 ದಿನದ ಒಳಗೆ ವಸ್ತುಸ್ಥಿತಿ ವರದಿ ನೀಡುವಂತೆ ಕಾರ್ಮಿಕ ನಿರೀಕ್ಷಕ ಶ್ರೀಕಾಂತ್ ಅವರಿಗೆ ನಿರ್ದೇಶಿಸಿದರು.
ಮುಂದಿನ 15-20 ದಿನಗಳಲ್ಲಿ ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಜಂಟಿ ಸಭೆ ನಡೆಸಲಾಗುವುದು ಎಂದುಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಕೊರಟಗೆರೆ ತಾಲ್ಲೂಕಿನ ಬಜ್ಜನಹಳ್ಳಿಯಲ್ಲಿ ಕಣ್ವ ಗಾರ್ಮೆಂಟ್ ಇದೆ. ಈಗ ಅದನ್ನು ಮುಚ್ಚಿದ್ದು ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.
ಕಾರ್ಮಿಕರು ಕಳೆದ ಏಳೆಂಟು ವರ್ಷಗಳಿಂದ ದುಡಿಯುತ್ತಿದ್ದಾರೆ. ಏಕಾಏಕಿ ಆಡಳಿತ ಮಂಡಳಿ ಘಟಕ ಮುಚ್ಚಿದ್ದು ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದಿದೆ. ಕಾರ್ಮಿಕರಿಗೆ ಕಾನೂನುಬದ್ಧವಾಗಿ ಬರಬೇಕಾಗಿದ್ದ ₹ 1.46 ಕೋಟಿ ಹಣ ಬಂದಿಲ್ಲ. ಇದನ್ನು ಕೊಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಕಾರ್ಮಿಕರಾದ ಗೋಪಾಲ್, ಭೀಮೇಗೌಡ, ತಿಮ್ಮಪ್ಪ, ರತ್ನಮ್ಮ, ಶೈಲಾ, ಆನಂದ, ಟೀಮೆಕ್ ಕಾರ್ಮಿಕರ ಸಂಘದ ಉಪಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಫುಟ್‍ಪಾತ್ ವ್ಯಾಪಾರಿಗಳ ಸಂಘದ ಮುತ್ತುರಾಜ್, ವಸೀಂ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.