ADVERTISEMENT

ಗೆದ್ದು ಬಂದವರು: ಮನೋಬಲವೇ ಮದ್ದು

ಅಭಿಲಾಷ ಬಿ.ಸಿ.
Published 20 ಆಗಸ್ಟ್ 2020, 7:16 IST
Last Updated 20 ಆಗಸ್ಟ್ 2020, 7:16 IST
ದೇವಿಕಾ
ದೇವಿಕಾ   

ತುಮಕೂರು: ‘ಕೇವಲ 35 ವರ್ಷಕ್ಕೆ ಜೀವನದ ಪಯಣ ಮುಗಿಸಬೇಕೆ. 12 ವರ್ಷದವಳಿರುವಾಗಲೇ ತಾಯಿ ಕಳೆದುಕೊಂಡು ಅನುಭವಿಸಿದ ನೋವನ್ನು, ನನ್ನ ಮಕ್ಕಳು ಅನುಭವಿಸಬೇಕೆ ಎಂದು ಪ್ರಶ್ನಿಸಿಕೊಂಡೆ. ಸ್ವಂತವಾಗಿ ಉಸಿರಾಡುವವರೆಗೆ ಹೋರಾಟ ಮಾಡಲೇಬೇಕೆಂದು ನಿರ್ಧರಿಸಿಕೊಂಡೆ. ಹನ್ನೊಂದನೇ ದಿನ ಅದರಲ್ಲಿ ಸಫಲಳಾದೆ’...

–ನಗರದ ಬನಶಂಕರಿ ನಿವಾಸಿ ಹಾಗೂ ನಗರ ಪಾಲಿಕೆ ಮಾಜಿ ಮೇಯರ್ ಟಿ.ಎಸ್‌.ದೇವಿಕಾ ಕೋವಿಡ್‌ ಜಯಿಸಿದ ಪರಿಯಿದು. ನಿರಂತರವಾಗಿ 10 ದಿನ ಕೋವಿಡ್‌ ವಿರುದ್ಧ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಅವರೊಳಗಿನ ಇಚ್ಚಾಶಕ್ತಿಯಿಂದಲೇ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ದೇವಿಕಾ ಅವರಿಗೆ ಐದು ದಿನ ತೀವ್ರ ಜ್ವರ ಕಾಣಿಸಿಕೊಂಡಿತ್ತು. ನಂತರ ತೇಗು ಹೆಚ್ಚಾಗತೊಡಗಿತ್ತು. ಗ್ಯಾಸ್ಟ್ರಿಕ್‌ ಎಂದೇ ಭಾವಿಸಿದ್ದ ಅವರಿಗೆ ಅದು ಉಸಿರಾಟದ ತೊಂದರೆ ಎಂದು ತಿಳಿಯಲು ಕೆಲ ಸಮಯವೇ ಹಿಡಿಯಿತು. ಉಸಿರಾಟದ ಸಮಸ್ಯೆ ತೀವ್ರವಾದ ನಂತರ ಜಿಲ್ಲಾಸ್ಪತ್ರೆ ಐಸಿಯುನಲ್ಲಿ ದಾಖಲಿಸಲಾಯಿತು. ಆಕ್ಸಿಜನ್‌ ಸ್ಯಾಚುರೇಷನ್‌ ಕ್ರಮೇಣ ಕುಸಿಯುತ್ತಲೇ ಇತ್ತು. ಆದರೆ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಲಾಗಿತ್ತು.

ADVERTISEMENT

‘ಮೂರು ದಿನ ವೆಂಟಿಲೇಟರ್‌ನಲ್ಲಿ ಇದ್ದೆ. ಅಷ್ಟರಲ್ಲಿ ವೈದ್ಯರು ನಮ್ಮ ಕುಟುಂಬದವರಿಗೆ ಕರೆ ಮಾಡಿ, ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. 35 ವರ್ಷದವರಾದರೂ ಸದ್ಯದ ದೇಹ ಸ್ಥಿತಿ 80 ವರ್ಷದವರಂತಿದೆ. ಸ್ಥಿತಿ ಗಂಭೀರವಾಗಿದೆ. ನಮ್ಮ ಕೈಯಲ್ಲಿ ಏನು ಇಲ್ಲ’ ಎಂದು ಕೈಚೆಲ್ಲಿದ್ದರು.

‘ಎರಡನೇ ಬಾರಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಕೋವಿಡ್‌ ಸೋಂಕು ಇರುವುದು ದೃಢವಾಗಿತ್ತು. ಕೋವಿಡ್‌ ಐಸಿಯುನಲ್ಲಿ ನಿತ್ಯವೂ ಒಬ್ಬೊಬ್ಬರು ಸಾಯುತ್ತಿದ್ದರು. ಇದು ನನ್ನನ್ನು ಅಧೀರಳನ್ನಾಗಿತ್ತು. ಆಕ್ಸಿಜನ್‌ ಸ್ಯಾಚುರೇಷನ್‌ನ್ನು ಕುಗ್ಗಿಸುತ್ತಿತ್ತು. ಹಾಗಾಗಿ ನಾನು ಪ್ರತ್ಯೇಕ ಕೊಠಡಿಗೆ ಸ್ಥಳಾಂತರವಾದೆ’ ಎಂದು ಹೇಳಿದರು.

‘ನಾಲ್ಕನೇ ದಿನಕ್ಕೆ ನಾನು ಯಾರೊಂದಿಗೂ ಮಾತನಾಡಲು ಆಗುತ್ತಿರಲಿಲ್ಲ. ಕಣ್ಣಿನಲ್ಲೇ ಪ್ರತಿಕ್ರಿಯಿಸುತ್ತಿದ್ದೆ. ಬಾಯಿಯಿಂದ ಧ್ವನಿ, ಉಸಿರು ಹೊರಡುತ್ತಿರಲಿಲ್ಲ. ನ್ಯುಮೊನಿಯಾವೂ ಗಂಭೀರವಾಗಿತ್ತು. ಇದು ನನ್ನನ್ನು ಖಿನ್ನತೆಗೆ ಜಾರಿಸಿತ್ತು. ಎಂಟು ದಿನ ಕಳೆದರೂ ಉಸಿರಾಟದ ಸ್ಥಿತಿ ಸುಧಾರಿಸಲಿಲ್ಲ. ಆದರೆ ಮಾನಸಿಕವಾಗಿ ಗಟ್ಟಿಯಾದೆ. ಅಷ್ಟರಲ್ಲಿ ನಮ್ಮ ಪರಿಚಿತ ವೈದ್ಯರೊಬ್ಬರಿಂದ ಬೆಂಗಳೂರಿನಿಂದ ಇಂಜೆಕ್ಷನ್‌ ತರಿಸಲಾಯಿತು. 9ನೇ ದಿನ ಆ ಔಷಧಿ ಕೊಟ್ಟರು. ಬೆಳಿಗ್ಗೆ ಹೊತ್ತಿಗೆ ಶೇ 10ರಷ್ಟು ಗುಣವಾಗಿದ್ದೆ. ನಂತರದ ದಿನಗಳಲ್ಲಿ ನನ್ನ ಉಸಿರಾಟ ಸಹಜ ಸ್ಥಿತಿಗೆ ಬಂದಿತ್ತು. 10 ದಿನದ ನಂತರ ಮೊದಲ
ಬಾರಿಗೆ ಎದ್ದು ನಿಂತಿದ್ದೆ. ಕೃತಕ ಆಮ್ಲಜನಕವಿಲ್ಲದೆ ಉಸಿರಾಡಿದ್ದೆ. ನನ್ನ ಇಚ್ಚಾಶಕ್ತಿಯೇ ಗಂಭೀರ
ಸ್ಥಿತಿಯಲ್ಲಿದ್ದ ನನ್ನನ್ನು ಗುಣವಾಗಿಸಿತು’ ಎಂದು ಸ್ಮರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.