ಪಾವಗಡ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕಟಾವು ಹಂತದಲ್ಲಿರುವ ಶೇಂಗಾ ಜಮೀನಿನಲ್ಲಿಯೇ ಮೊಳಕೆ ಬರುತ್ತಿದೆ.
ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಕಟಾವು ಮಾಡಿರುವ ಶೇಂಗಾ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಶೇಂಗಾ ಬೂದಿ ರೋಗ ವ್ಯಾಪಿಸುತ್ತಿದೆ.
ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಾದ್ಯಂತ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಬಹುತೇಕ ಶೇ 85 ರಿಂದ 90ರಷ್ಟು ಪ್ರದೇಶದಲ್ಲಿ ಶೇಂಗಾ ಕಟಾವು ಮಾಡಲಾಗಿದೆ. ಜುಲೈ ಕೊನೆಯಲ್ಲಿ ಬಿತ್ತನೆ ಮಾಡಿದ ಬೆಳೆ ಕಟಾವಿನ ಹಂತ ತಲುಪಿದೆ. ತೊಗರಿ ಬೆಳೆ ಹೂವಿನ ಹಂತದಲ್ಲಿದೆ. ನಿರಂತರ ಮಳೆಯಿಂದಾಗಿ ಕಾಯಿಕೊರಕ, ಕೀಟ ಬಾಧೆ ಹೆಚ್ಚುವ ಸಾಧ್ಯತೆ ಇದೆ.
ತಾಲ್ಲೂಕಿನಾದ್ಯಂತ ಈ ಬಾರಿ ದಸರಾ, ದೀಪಾವಳಿ ವೇಳೆಗೆ ಬೆಳೆ ಬರುವಂತೆ ಚೆಂಡು ಹೂವಿನ ಸಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಾಟಿ ಮಾಡಲಾಗಿತ್ತು. ಆದರೆ ಮಳೆಯಿಂದಾಗಿ ಚೆಂಡು ಹೂ ಗಿಡದಲ್ಲಿಯೇ ಕೊಳೆಯುತ್ತಿದೆ. ತಾಕುಗಳಲ್ಲಿ ಮಳೆ ನೀರು ನಿಂತು ಬೆಳೆ ಹಾನಿಯಾಗಿದೆ.
ತಾಲ್ಲೂಕಿನ ಕರೇಕ್ಯಾತನಹಳ್ಳಿಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಕೊಯ್ಲು ಹಂತದಲ್ಲಿದ್ದ ಭತ್ತ ಸಂಪೂರ್ಣ ಮಲಗಿದೆ. ಅರಸೀಕೆರೆ ಸೇರಿದಂತೆ ವಿವಿಧೆಡೆ ಹತ್ತಿ ಬಿಡಿಸಲಾಗದೆ ಗಿಡಗಳಲ್ಲಿಯೇ ಹಾಳಾಗುತ್ತಿದೆ.
ಕೀಟ, ರೋಗ ನಿಯಂತ್ರಿಸಲು ಕೃಷಿ ಇಲಾಖೆಯಿಂದ ಕೀಟನಾಶಕ ವಿತರಿಸಲಾಗುತ್ತಿದೆ. ಮಳೆಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಸಲಹೆ ಸೂಚನೆ ನೀಡಲಾಗುತ್ತಿದೆ. ತಗ್ಗು ಪ್ರದೇಶದಲ್ಲಿ ಬಸಿಗಾಲುವೆ ಮಾಡಿ ನೀರು ಹೊರ ಹೋಗಲು ವ್ಯವಸ್ಥೆ ಮಾಡಬೇಕು ಎಂದು ರೈತರಿಗೆ ತಿಳಿಸಲಾಗಿದೆ. ಮಳೆಯಿಂದಾಗಿ ಬೆಳೆ ನಷ್ಟವಾದಲ್ಲಿ ಕೂಡಲೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಅಜಯ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.