ADVERTISEMENT

ಬೈರೇನಹಳ್ಳಿ: ಮನೆಗೆ ನುಗ್ಗಿದ ನೀರು

ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆಯ ಉಲ್ಬಣ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:32 IST
Last Updated 18 ಮೇ 2024, 14:32 IST
ಬೈರೇನಹಳ್ಳಿ ರಸ್ತೆ ಬದಿಯ ಮನೆಗಳಿಗೆ ನೀರು ನುಗ್ಗಿದ ಸ್ಥಳಕ್ಕೆ ತಹಶೀಲ್ದಾರ್ ಕೆ.ಮಂಜುನಾಥ ಭೇಟಿ ನೀಡಿ ಸಮಸ್ಯೆ ಆಲಿಸಿದರು
ಬೈರೇನಹಳ್ಳಿ ರಸ್ತೆ ಬದಿಯ ಮನೆಗಳಿಗೆ ನೀರು ನುಗ್ಗಿದ ಸ್ಥಳಕ್ಕೆ ತಹಶೀಲ್ದಾರ್ ಕೆ.ಮಂಜುನಾಥ ಭೇಟಿ ನೀಡಿ ಸಮಸ್ಯೆ ಆಲಿಸಿದರು    

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಹಲವು ಸಮಸ್ಯೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶುಕ್ರವಾರ ರಾತ್ರಿ ಸುರಿದ ಮಳೆ ನೀರು ರಸ್ತೆ ಅಕ್ಕಪಕ್ಕದ ಮನೆಗಳಿಗೆ ನುಗ್ಗಿತ್ತು. ಹೆದ್ದಾರಿ ಕಾಮಗಾರಿ ಸಂಧರ್ಭದಲ್ಲಿ ರಸ್ತೆ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸದ ಕಾರಣ ಚರಂಡಿ ಮೂಲಕ ಪಕ್ಕದಲ್ಲಿನ ಕಟ್ಟೆಗೆ ಹರಿಯಬೇಕಿದ್ದ ಮಳೆ ನೀರು ಈಗ ರಸ್ತೆ ಇಕ್ಕೆಲಗಳ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೆದ್ದಾರಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮುಗಿಸಲಾಗಿದೆ ಎಂದು ದೂರಿದ್ದಾರೆ.

ಬೈರೇನಹಳ್ಳಿಯ ರೈತ ಲಕ್ಷ್ಮಣ್ ಪ್ರಸಾದ್, ನಂದೀಶ್, ಗಂಗಮ್ಮ ಅವರ ಮನೆ ಮತ್ತು 8ಕ್ಕೂ ಅಧಿಕ ಮಳಿಗೆ ಹಾಗೂ ಔಷಧಿ ಅಂಗಡಿಗೆ ನೀರು ನುಗ್ಗಿದೆ. ದಿನಸಿ ಸಾಮಗ್ರಿ, ದವಸ ಧಾನ್ಯ ನಾಶವಾಗಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ 60ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಈಗ ಸಂಪರ್ಕವೇ ಕಡಿತಗೊಂಡಿದೆ. ‌

ADVERTISEMENT

ಕೊರಟಗೆರೆಯಿಂದ ಗೌರಿಬಿದನೂರು ಸಂಪರ್ಕಿಸುವ ಮುಖ್ಯರಸ್ತೆಯ ಬೈರೇನಹಳ್ಳಿಯಿಂದ ಶಿರಾ, ಮಧುಗಿರಿ, ಪಾವಗಡ ಸೇರಿದಂತೆ ಹಿಂದೂಪುರ ಸಂಪರ್ಕಿಸುವ ಮುಖ್ಯ ರಸ್ತೆ ಕೂಡ ಇದಾಗಿದೆ. ನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ.

ಬೈರೇನಹಳ್ಳಿ ಗ್ರಾಮ ಐದು ತಾಲ್ಲೂಕನ್ನು ಸಂಪರ್ಕಿಸುವ ಕೇಂದ್ರ ಸ್ಥಾನವಾಗಿದೆ. ಈ ಭಾಗದಲ್ಲಿ ಈಗ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಚರಂಡಿ ನಿರ್ಮಿಸದ ಕಾರಣದಿಂದ ಕಳೆದೆರಡು ದಿನಗಳಿಂದ ಮಳೆಯಿಂದಾಗಿ ತೀವ್ರ ಸಮಸ್ಯೆ ಸೃಷ್ಟಿಯಾಗಿದೆ.

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಮನೆಗೆ ನುಗ್ಗಿದ ಮಳೆನೀರು.

Quote - ಕಾಮಗಾರಿ ಅವೈಜ್ಞಾನಿಕವಾಗಿದೆ. ಗುತ್ತಿಗೆದಾರರು ಕಾಮಗಾರಿ ಮಾಡುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿ ಸಂಬಂಧಪಟ್ಟ ಗುತ್ತಿಗೆದಾರನಿಗೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಎಚ್ಚರಿಕೆ ನೀಡಿದ್ದೇನೆ. ಕೆ.ಮಂಜುನಾಥ ತಹಶೀಲ್ದಾರ್

Quote - ಗ್ರಾಮದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿರುವ ಕಾರಣ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಮಸ್ಯೆ ಹೆಚ್ಚಾಗಿದೆ. ಚರಂಡಿ ಸೇರಬೇಕಾದ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಲಕ್ಷ್ಮಣ್ ಪ್ರಸಾದ್ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.