ADVERTISEMENT

ತುರುವೇಕೆರೆ: ಸಂತಸ ತಂದ ಭರಣಿ ಮಳೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 5:35 IST
Last Updated 12 ಮೇ 2024, 5:35 IST
ತುರುವೇಕೆರೆ ತಾಲ್ಲೂಕಿನ ಹೆಗ್ಗೆರೆಯಲ್ಲಿ ಮಳೆಗಾಳಿಗೆ ತೆಂಗಿನ ಮರ ಮತ್ತು ವಿದ್ಯುತ್ ಕಂಬ ರಸ್ತೆಗೆ ಅಡ್ಡವಾಗಿ ಉರುಳಿವೆ
ತುರುವೇಕೆರೆ ತಾಲ್ಲೂಕಿನ ಹೆಗ್ಗೆರೆಯಲ್ಲಿ ಮಳೆಗಾಳಿಗೆ ತೆಂಗಿನ ಮರ ಮತ್ತು ವಿದ್ಯುತ್ ಕಂಬ ರಸ್ತೆಗೆ ಅಡ್ಡವಾಗಿ ಉರುಳಿವೆ   

ತುರುವೇಕೆರೆ: ತಾಲ್ಲೂಕಿನ ಹಲವೆಡೆ ಶುಕ್ರವಾರ ತಡರಾತ್ರಿ ಮಿಂಚು, ಬಿರುಗಾಳಿ ಸಹಿತ ಸುರಿದ ಭರಣಿ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಶುಕ್ರವಾರ ಮಧ್ಯರಾತ್ರಿ ಒಂದು ಗಂಟೆಗೂ ಹೆಚ್ಚು ಹೊತ್ತು ಉತ್ತಮ ಮಳೆ ಸುರಿಯಿತು.

ಅಂರ್ತಜಲದ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ತೆಂಗು ಮತ್ತು ಅಡಿಕೆ ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದರು. ಈ ಮಳೆಯಿಂದ ವಾಣಿಜ್ಯ ಬೆಳೆಗಳು ಮತ್ತು ಭತ್ತಕ್ಕೆ ಅನುಕೂಲಕರವಾಗಿದೆ ಎಂದು ರೈತ ಚಂದ್ರಣ್ಣ ವಿಶ್ವಾಸ ವ್ಯಕ್ತಪಡಿಸಿದ್ದರು.

ADVERTISEMENT

ತಾಲ್ಲೂಕಿನ ಸಂಪಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಗದೇವನಹಳ್ಳಿ, ಅಂಗರೇಖನಹಳ್ಳಿ, ಬಸವನಹಳ್ಳಿ, ಹಂಪಲಾಪುರ, ತಳವಾರನಹಳ್ಳಿ, ಮಲ್ಲೇನಹಳ್ಳಿ, ಮಾಸ್ಕನಹಳ್ಳಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಕಸಬಾ ವ್ಯಾಪ್ತಿಯ ತುರುವೇಕೆರೆ, ತಾವರೇಕೆರೆ, ಪುರ, ಚಂಡೂರು, ಶ್ರೀರಾಂಪುರ, ತಾಳ್ಕೆರೆ ಹಾವಾಳ, ದಂಡಿನಶಿವರ ಹೋಬಳಿಯ ದಂಡಿನಶಿವರ, ಹಡವನಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಹುಲ್ಲೇಕೆರೆ, ಬಳ್ಳೆಕಟ್ಟೆ ಮತ್ತು ಹಟ್ಟಿಹಳ್ಳಿಯಲ್ಲಿ ಹದ ಮಳೆಯಾಗಿ ತೋಟದ ಸಾಲುಗಳಲ್ಲಿ ನೀರು ಸಂಗ್ರಹವಾಗಿದೆ ಎಂದು ಹುಲ್ಲೇಕೆರೆ ರೈತ ಎಚ್.ಬಿ.ಗಂಗಾಧರ್ ತಿಳಿಸಿದರು.

ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿತ್ತು. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿಗಳು ಬೇಟಿ ನೀಡಿ ತೆರೆವು ಕಾರ್ಯ ಮಾಡಿದ್ದಾರೆ.

ಕಸಬಾ ವ್ಯಾಪ್ತಿಯ ಪುರ ಗ್ರಾಮದ ಯಶೋದಮ್ಮ ಅವರ ಮನೆಯ ಮಳೆಗೆ ಗೋಡೆ ಕುಸಿದು ಬಿದ್ದು ಮನೆಯ ಸಣ್ಣಪುಟ್ಟ ವಸ್ತುಗಳು ಹಾಳಾಗಿದೆ.

ಕೆಲವೆಡೆ ತೆಂಗು, ಅಡಿಕೆ ಮರಗಳು ಉರುಳಿವೆ.

ತುರುವೇಕೆರೆ ಪಟ್ಟಣ 45 ಮಿ.ಮೀ, ಸಂಪಿಗೆ 57, ಮಾಯಸಂದ್ರ 1.8, ದಂಡಿನಶಿವರದಲ್ಲಿ 15.6 ಮಿ.ಮೀಟರ್ ಮಳೆಯಾಗಿದೆ.

ಹಡವನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಳೆಗೆ ವಿದ್ಯುತ್ ಕಂಬ ಮುರಿದಿದೆ
ಲೋಕಮ್ಮನಹಳ್ಳಿ ಸಮೀಪ ಬೃಹತ್ ತೆಂಗಿನ ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದೆ
ಪುರ ಗ್ರಾಮದ ಯಶೋದಮ್ಮ ಅವರ ಮನೆಯ ಗೋಡೆ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.