ADVERTISEMENT

ತಿಪಟೂರು | ಪೊಲೀಸ್‌ ಸರ್ಪಗಾವಲಿನಲ್ಲಿ ರಾಜುಕಾಲುವೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:03 IST
Last Updated 22 ಜೂನ್ 2024, 14:03 IST
ತಿಪಟೂರು ಕಂಚಾಘಟ್ಟ ಬಡಾವಣೆಗೆ ಹೊಂದಿಕೊಂಡ ಅಮಾನಿಕೆರೆಗೆ ಸೇರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಯಿತು
ತಿಪಟೂರು ಕಂಚಾಘಟ್ಟ ಬಡಾವಣೆಗೆ ಹೊಂದಿಕೊಂಡ ಅಮಾನಿಕೆರೆಗೆ ಸೇರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಯಿತು   

ತಿಪಟೂರು: ನಗರದ ಕಂಚಾಘಟ್ಟ ಬಡಾವಣೆಗೆ ಹೊಂದಿಕೊಂಡ ಅಮಾನಿಕೆರೆಗೆ ಸೇರುವ ಒಂದು ಕಿ.ಮೀ ರಾಜಕಾಲುವೆ ಒತ್ತುವರಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಡಿವೈಎಸ್‍ಪಿ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸಲಾಯಿತು.

ಸಣ್ಣ ನೀರಾವರಿ ಇಲಾಖೆಯಿಂದ ಹಿಂದೆ ಎರಡು ಬಾರಿ ತೆರವುಗೊಳಿಸಲು ಪ್ರಯತ್ನಿಸಿದ್ದಾಗ ಸ್ಥಳೀಯರಾದ ಯೋಗೀಶ್ ಟಿ.ಆರ್. ಜೆಎಂಎಫ್‍ಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ತಡೆಯ್ಞಾಜೆ ತಂದಿದ್ದರು. ನ್ಯಾಯಾಲಯ ತಡೆಯ್ಞಾಜೆ ರದ್ದುಪಡಿಸಿದ ನಂತರ ಇಲಾಖೆ ಅಧಿಕಾರಿಗಳು ರಾಜಕಾಲುವೆ ತೆರವಿಗೆ ಮುಂದಾಗಿದ್ದಾರೆ.

ಒಂದು ಕಿ.ಮೀ ಉದ್ದ 40ರಿಂದ 50 ಅಡಿ ಅಗಲ, ಏಳೆಂಟು ಅಡಿ ಆಳದ ರಾಜಕಾಲುವೆ ತೆರವಿಗೆ ಸರ್ಕಾರದಿಂದ ₹1.50 ಕೋಟಿ ಅನುದಾನ ಮಂಜೂರಾಗಿದೆ.

ADVERTISEMENT

ಭೂಮಾಪನ ಇಲಾಖೆ, ನಗರಸಭೆಯ ಪೌರಯುಕ್ತ, ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆ ಸಹಯೋಗದಲ್ಲಿ ಪೊಲೀಸ್, ಸಶಸ್ತ ಮೀಸಲು ಪಡೆಯ ಸರ್ಪಗಾವಲಿನಲ್ಲಿ ರಾಜಕಾಲುವೆ ತೆರವಿಗೆ ಮುಂದಾದರು.

ಸ್ಥಳದಲ್ಲಿ ಡಿವೈಎಸ್‍ಪಿ ವಿನಾಯಕ ಶೆಟಗೇರಿ, ಪೌರಯುಕ್ತ ವಿಶ್ವೇಶ್ವರ ಬದರಗೆಡೆ, ಸಣ್ಣ ನೀರಾವರಿ ಇಲಾಖೆ ಎಇಇ ದೊಡ್ಡಯ್ಯ, ಬೆಸ್ಕಾಂ ಎಇಇ ಮನೋಹರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ರಾಜಕಾಲುವೆಗೆ ತೆರವಿಗೆ ಪೋಲೀಸ್ ಇಲಾಖೆಯಿಂದ ಬಂದೋಬಸ್ತ್ ಅಯೋಜನೆ ಮಾಡಲಾಗಿರುವುದು.

ಕಟ್ಟಡಗಳು ತೆರವು

ಈ ರಾಜಕಾಲುವೆ ತಿಪಟೂರಿನ ಮಾದಿಹಳ್ಳಿಯಿಂದ ನಗರದ ಅಮಾನಿಕೆರೆಯವರೆಗೂ ಒಟ್ಟು ಎರಡು ಕಿಲೋ ಮೀಟರ್ ಉದ್ದವಿದ್ದು 30ರಿಂದ 40 ಅಡಿ ಅಗಲವಿದೆ. ಈ ರಾಜಕಾಲುವೆಗೆ ಬಡಾವಣೆಗಳು ಹಾಗೂ ನಿವೇಶನ ಮಾಡುವವರು ಮಣ್ಣು ತುಂಬಿ ಸಮತಟ್ಟು ಮಾಡಿಕೊಂಡು ಅದರ ತುದಿವರೆಗೂ ಸೈಟ್‌ಗಳನ್ನು ವಿಂಗಡಿಸಿಕೊಂಡಿದ್ದರು. ಈ ಸೈಟ್‌ಗಳಿಗೆ ಬರಲು ದಾರಿಯಾಗಿ ಈ ರಾಜಕಾಲುವೆಯನ್ನೇ ತೋರಿಸಲಾಗಿತ್ತು. ಈಗ ಈ ಬಡಾವಣೆಗಳ ನಿವೇಶನಗಳಿಗೆ ತೆರಳಲು ದಾರಿ ಇಲ್ಲವಾಗಿದೆ. ಈ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ತಮ್ಮ ನಿವೇಶನಗಳಿಗೆ ತೆರಳಲು ಹೊಸದಾಗಿ ದಾರಿ ಮಾಡಿಕೊಳ್ಳಬೇಕಿದೆ. ಕೆಲವೆಡೆ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದು ಅದನ್ನೂ ಈಗ ತೆರೆವುಗೊಳಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.