ADVERTISEMENT

ತುಮಕೂರು: ಎಲ್ಲೆಡೆ ರಾಮನಾಮ ಜಪ

ಮೊಳಗಿದ ರಾಮ ನಾಮ, ವಿವಿಧ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 5:49 IST
Last Updated 23 ಜನವರಿ 2024, 5:49 IST
ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ತುಮಕೂರಿನ ಕೆ.ಆರ್‌.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಸೋಮವಾರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು
ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ತುಮಕೂರಿನ ಕೆ.ಆರ್‌.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಸೋಮವಾರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು   

ತುಮಕೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ರಾಮನನ್ನು ಸ್ಮರಿಸಲಾಯಿತು. ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ದೇವಸ್ಥಾನಗಳಲ್ಲಿ ಬೆಳಗಿನ ಜಾವದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇಗುಲ, ಮನೆಗಳನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ–ಹವನಗಳು ಇತರೆ ಪೂಜಾ ಕೈಂಕರ್ಯಗಳು ಜರುಗಿದವು. ಹಲವು ಕಡೆಗಳಲ್ಲಿ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಭಕ್ತರು ಬೆಳಗ್ಗೆಯೇ ದೇಗುಲಗಳಿಗೆ ಭೇಟಿ ನೀಡಿ, ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬಿ.ಎಚ್‌.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಕೋತಿತೋಪು ರಸ್ತೆ, ಮಂಡಿಪೇಟೆ ಸೇರಿದಂತೆ ವಿವಿಧೆಡೆ ರಾಮನ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಯಿತು. ಅನ್ನ ಸಂತರ್ಪಣೆ ಮಾಡಲಾಯಿತು. ಮಜ್ಜಿಗೆ, ಪಾನಕ, ಹೆಸರು ಬೇಳೆ ವಿತರಣೆ ಮಾಡಲಾಯಿತು.

ADVERTISEMENT

ಕೆ.ಆರ್‌.ಬಡಾವಣೆಯ ಶ್ರೀರಾಮ ಮಂದಿರ, ಎಸ್‌.ಎಸ್‌.ವೃತ್ತ, ಬಿಜಿಎಸ್‌ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆಯ ಮೂಲಕ ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಎಸ್.ಎಸ್.ಪುರಂನ ಸೀತಾ ರಾಮ ಮಂದಿರ, ಶೆಟ್ಟಿಹಳ್ಳಿ ಗೇಟ್‍ನ ಅಭಯ ಆಂಜನೇಯಸ್ವಾಮಿ ದೇವಾಲಯ ಒಳಗೊಂಡಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀರಾಮ, ಆಂಜನೇಯಸ್ವಾಮಿ ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆ ಭಕ್ತರು ಸೇರಿದ್ದರು.

ತುಮಕೂರಿನಲ್ಲಿ ಸೋಮವಾರ ನಡೆದ ಕರ ಸೇವಕರ ಮಿಲನ ಕಾರ್ಯಕ್ರಮದಲ್ಲಿ ಇಟ್ಟಿಗೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ ಕರ ಸೇವಕ ಸಂಪಿಗೆ ಶ್ರೀಧರ್‌ ಇತರರು ಹಾಜರಿದ್ದರು

ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಹಾಕಲಾಗಿತ್ತು. ಆಟೊ, ಬೈಕ್‌ಗಳಲ್ಲಿ ಬಾವುಟಗಳನ್ನು ಹಿಡಿದು ಸಾಗುತ್ತಿದ್ದ ದೃಶ್ಯಗಳು ಗಮನ ಸೆಳೆದವು.

ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಯದಲ್ಲಿ ಸಾರ್ವಜನಿಕರು ‘ಜೈಶ್ರೀರಾಮ್‌’ ಎಂಬ ಘೋಷಣೆಗಳನ್ನು ಕೂಗಿದರು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶ್ರೀರಾಮ ಮಂದಿರದಲ್ಲಿ ಮಾರುತಿ ಯುವಕರ ಸಂಘದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ಸಮಯದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನೆರವೇರಿತು. ಪೋಷಕರು ತಮ್ಮ ಮಕ್ಕಳಿಗೆ ರಾಮನ ವೇಷ ತೊಡಿಸಿ ಖುಷಿ ಪಟ್ಟರು.

ತುಮಕೂರಿನ ಶೆಟ್ಟಿಹಳ್ಳಿಗೇಟ್‍ನಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಭಜನಾ ಕಾರ್ಯಕ್ರಮ ನೆರವೇರಿತು
ತುಮಕೂರಿನ ಕೆ.ಆರ್‌.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು

ಕರ ಸೇವಕರ ಮಿಲನ

ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಮಂಟಪದಲ್ಲಿ ಕರ ಸೇವಕರ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಮ ಭಾರತ ಮಾತೆ ಭಾವಚಿತ್ರ ಹಾಗೂ ನಾಮದ ಚಿಲುಮೆಯ ಗಂಗಾ ಜಲ ಮತ್ತು ಅಯೋಧ್ಯೆಯಿಂದ ತಂದಿದ್ದ ನಾಲ್ಕು ಇಟ್ಟಿಗೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ರಾಮ ಮಂದಿರ ನಿರ್ಮಾಣ ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಎಲ್ಲರೂ ರಾಮ ರಾಜ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ನಾ.ತಿಪ್ಪೇಸ್ವಾಮಿ ಮುಖಂಡರಾದ ಕೆ.ಪಿ.ಮಹೇಶ ಸಂಪಿಗೆ ಶ್ರೀಧರ್‌ ಟಿ.ಎನ್.ಮಹಲಿಂಗಪ್ಪ ಟಿ.ಎಸ್.ಸದಾಶಿವಯ್ಯ ಟಿ.ಸಿ.ಶಿವಶಂಕರ್ ಕಾಂಡಿಮೆಂಟ್ ಶಿವಣ್ಣ ಮುನಿರಾಮಯ್ಯ ಶಿವಪ್ರಕಾಶ್ ಟಿ.ಜಿ.ದೇವರಾಜು ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.