ತುಮಕೂರು: ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಗರ್ಭಿಣಿಯಾಗಲು ಕಾರಣನಾದ ವರಸೆಯಲ್ಲಿ ಸಹೋದರನಾಗಬೇಕಿದ್ದ ವ್ಯಕ್ತಿಗೆ ಜೀವಾವಧಿ (ಸಾಯುವವರೆಗೆ) ಶಿಕ್ಷೆ ವಿಧಿಸಿ ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್ (ಪೋಕ್ಸೊ) ನ್ಯಾಯಾಲಯ ಆದೇಶಿಸಿದೆ.
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಹಳ್ಳಿಯೊಂದರ ಮೋಹಿತ್ ಕುಮಾರ್ ಎಂಬಾತನಿಗೆ ಜೀವಾವಧಿ ಶಿಕ್ಷೆಯ ಜತೆಗೆ ₹3.50 ಲಕ್ಷ ದಂಡವನ್ನು ವಿಧಿಸಲಾಗಿದೆ.
ಈಗಾಗಲೇ ಮದುವೆಯಾಗಿದ್ದ ಮೋಹಿತ್ ಕುಮಾರ್, ವರಸೆಯಲ್ಲಿ ಸಹೋದರಿ ಆಗಬೇಕಿದ್ದ 13 ವರ್ಷದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದ್ದ. ನಂತರ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದ. ಬಾಲಕಿ ಗರ್ಭಿಣಿಯಾದ ನಂತರ ಅತ್ಯಾಚಾರದ ವಿಚಾರ ಮನೆಯವರಿಗೆ ಗೊತ್ತಾಗಿದೆ.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಗೋಪಿನಾಥ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಹಣದಲ್ಲಿ ₹3.45 ಲಕ್ಷ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹7 ಲಕ್ಷ ಪರಿಹಾರ ಸೇರಿ ಒಟ್ಟು ₹10.45 ಲಕ್ಷ ಪರಿಹಾರವನ್ನು ನೊಂದ ಬಾಲಕಿಗೆ ನೀಡುವಂತೆ ಆದೇಶಿಸಿದ್ದಾರೆ.
ಬಾಲಕಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.