ADVERTISEMENT

ತುಮಕೂರು | ಕೊಳವೆ ಬಾವಿಗೆ ದರ: ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 6:46 IST
Last Updated 27 ಮಾರ್ಚ್ 2024, 6:46 IST
ಕೊಳವೆ ಬಾವಿ
ಕೊಳವೆ ಬಾವಿ   

ತುಮಕೂರು: ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯಲು ಏಕ ಮಾದರಿಯ ದರ ನಿಗದಿಪಡಿಸುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಕೊಳವೆ ಬಾವಿ ಕೊರೆಯುವ ಯಂತ್ರಗಳ ಮಾಲೀಕರು ಮನಸ್ಸಿಗೆ ಬಂದಂತೆ ದರ ವಸೂಲಿ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿ ಅಡಿಗೆ ₹90–95 ವಿಧಿಸುತ್ತಿದ್ದರು. ಈಗ ಬೇಡಿಕೆ ಹೆಚ್ಚಾಗಿರುವುದರಿಂದ ಅಡಿಗೆ ₹115–120 ವಸೂಲಿ ಮಾಡುತ್ತಿದ್ದಾರೆ. ದುಬಾರಿ ದರ ನೀಡುವುದು ಕಷ್ಟಕರವಾಗಿದೆ ಎಂದು ರೈತರು ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಸಮಿತಿ ರಚಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬರಿದಾಗಿವೆ. ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ರೈತರ ಅನುಕೂಲಕ್ಕಾಗಿ ಕೊಳವೆ ಬಾವಿ ಕೊರೆಯಲು ಏಕದರ ನಿಗದಿಗಾಗಿ ಸಮಿತಿ ರಚಿಸಿ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳುವಂತೆ ಮಂಗಳವಾರ ನಡೆದ ಸಭೆಯಲ್ಲಿ ‌ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿರ್ದೇಶಿಸಿದರು.

ADVERTISEMENT

ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಹಿರಿಯ ಭೂ ವಿಜ್ಞಾನಿ ನಾಗವೇಣಿ, ‘ಬೋರ್‌ವೆಲ್ ಯಂತ್ರಗಳ ಮಾಲೀಕರು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಜಿಲ್ಲೆಯಲ್ಲಿ 18 ಯಂತ್ರ ವಾಹನಗಳು ನೋಂದಣಿಯಾಗಿವೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ನೋಂದಣಿಯಾಗದ ಯಂತ್ರಗಳ ಮಾಲೀಕರಿಗೆ ನಿಯಮಾನುಸಾರ ದಂಡ ವಿಧಿಸಬೇಕು. ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ರಿಗ್ ಯಂತ್ರ ವಾಹನಗಳ ಮಾಲೀಕರ ಪಟ್ಟಿಯನ್ನು ತುರ್ತಾಗಿ ಜಿಲ್ಲಾ ಆಡಳಿತಕ್ಕೆ ನೀಡುವಂತೆ’ ಅಧಿಕಾರಿಗಳಿಗೆ ಸೂಚಿಸಿದರು.

ನಿಗದಿಪಡಿಸಿದ ದರಕ್ಕೆ ಕೊಳವೆ ಬಾವಿ ಕೊರೆಯುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ರಿಗ್ ಯಂತ್ರ ಮಾಲೀಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.