ADVERTISEMENT

ರಕ್ತ ಚೆಲ್ಲಾಡುವುದು ದೇಶಭಕ್ತಿಯಾಗಿದೆ: ಐಜಿಪಿ ಬಿ.ಆರ್.ರವಿಕಾಂತೇಗೌಡ ಆತಂಕ

ವೀಚಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವಿಕಾಂತೇಗೌಡ ಆತಂಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 3:00 IST
Last Updated 17 ಜೂನ್ 2024, 3:00 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ&nbsp;ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಬಿ.ಜನಾರ್ದನ ಭಟ್‌, ರವಿಕುಮಾರ್ ನೀಹ, ದಯಾನಂದ, ಮರಿರಂಗಯ್ಯ ಬಿದಲೋಟಿ, ಪಿ.ಉಮಾದೇವಿ&nbsp;ಅವರಿಗೆ ವೀಚಿ ಪ್ರಶಸ್ತಿ ಪ್ರದಾನ ಮಾಡಲಾಯಿತು. </p></div>

ತುಮಕೂರಿನಲ್ಲಿ ಭಾನುವಾರ ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಬಿ.ಜನಾರ್ದನ ಭಟ್‌, ರವಿಕುಮಾರ್ ನೀಹ, ದಯಾನಂದ, ಮರಿರಂಗಯ್ಯ ಬಿದಲೋಟಿ, ಪಿ.ಉಮಾದೇವಿ ಅವರಿಗೆ ವೀಚಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

ತುಮಕೂರು: ‘ಪ್ರಸ್ತುತ ಸಮಾಜದಲ್ಲಿ ಮನುಷ್ಯರನ್ನು ಕೊಲ್ಲುವುದು ದೇಶಪ್ರೇಮವಾಗಿ, ಮನುಷ್ಯರ ರಕ್ತ ಚೆಲ್ಲಾಡುವುದು ದೇಶಭಕ್ತಿಯಾಗಿ, ಮಹಿಳೆಯರ ಮೇಲಿನ ಅತ್ಯಾಚಾರ ಅತ್ಯಂತ ವೀರತನವಾಗಿ ಬದಲಾಗಿದೆ’ ಎಂದು ಕೇಂದ್ರ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ಈ ಕ್ರೌರ್ಯ, ಹಿಂಸೆ, ಅಮಾನವೀಯತೆ, ಅತ್ಯಾಚಾರ, ಅಸಮಾನತೆಯ ಆಚೆಗೂ ಏನೋ ಇದೆ ಎನ್ನುವುದನ್ನು ಸಾಹಿತ್ಯ, ಕಲೆ, ಕಾವ್ಯ ತೋರುತ್ತದೆ. ಅದು ನಮ್ಮನ್ನು ಮನುಷ್ಯರನ್ನಾಗಿಸುತ್ತದೆ. ಸಹನೀಯಗೊಳಿಸುತ್ತದೆ ಎನ್ನುವ ದೊಡ್ಡ ಆಸೆಯೊಡನೆ ನಾವೆಲ್ಲ ಬದುಕು ಬೇಕಾಗಿದೆ. ಹಲವು ಮನಸುಗಳು ಸಾಹಿತ್ಯ ಕಟ್ಟಿ ಕೊಡುವುದರ ಮೂಲಕ ಬದುಕು ಸಹನೀಯಗೊಳಿಸಲು ಒದ್ದಾಡುತ್ತಿವೆ ಎಂದರು.

ಅತ್ಯಂತ ಸುಲಭವಾಗಿ ಕೊಲ್ಲುವಂತಹ ಆಯುಧಗಳು ನಮ್ಮಲ್ಲಿ ಇವೆ. ಶಸ್ತ್ರಾಸ್ತ್ರ ಬಳಕೆಯಲ್ಲಿ ನಾವು ಮುಂದೆ ಇದ್ದೇವೆ. ವಿನಾಶದಲ್ಲಿ ಪರಿಣಿತಿ ಪಡೆದಿದ್ದೇವೆ. ಇದರ ವಿರುದ್ಧವಾಗಿ ಮನುಷ್ಯತ್ವ ರೂಪಿಸುವ ಹೊಣೆಗಾರಿಕೆ ಕಡಿಮೆಯಾಗುತ್ತಿದೆ. ಪೊಲೀಸರ ಪಾತ್ರ ಕನಿಷ್ಠ ಪ್ರಮಾಣದಲ್ಲಿದ್ದರೆ ಅದು ನಿಜವಾದ ನಾಗರಿಕ ಸಮಾಜ. ಆದರೆ ಈಗ ಪೊಲೀಸರ ಮೇಲೆ ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ. ಇದು ಆಗಬಾರದು ಎಂದರು.

ವೀಚಿ ಒಂದು ಕಡೆ ರಾಜಕೀಯ, ಮತ್ತೊಂದೆಡೆ ಕಾವ್ಯ, ಇನ್ನೊಂದು ಕಡೆ ಸೃಜನಶೀಲತೆ ಬಿತ್ತುವ ಕೆಲಸ ಮಾಡಿದರು. ಕೃಷಿಕರಾಗಿ, ಕವಿಯಾಗಿ, ಸಕ್ರಿಯ ರಾಜಕಾರಣಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಕಾಯಕ, ಕಾವ್ಯ ಎರಡೂ ಕ್ಷೇತ್ರದಲ್ಲಿ ಸೃಜನಶೀಲವಾಗಿ ಬದುಕಿದ್ದರು. ಎಲ್ಲ ಚಳವಳಿಗಳ ಸಾರವನ್ನು ಸರಿಯಾಗಿ ಅರ್ಥೈಸಿಕೊಂಡು ಕಾವ್ಯದ ಯಾತ್ರೆ ಮುಂದುವರಿಸಿದ್ದರು ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ‘ವೀಚಿ ವ್ಯಕ್ತಿತ್ವ, ಸಂಘಟನಾತ್ಮಕ ಶಕ್ತಿ ಎಲ್ಲ ಪ್ರಾದೇಶಿಕ ವ್ಯಾಪ್ತಿಯ ಒಳಗೆ ಒಂದು ಧ್ವನಿಯಾಗಿ ಇದ್ದಿದ್ದರೆ ನಮ್ಮ ವರ್ತಮಾನದ ಬದುಕು ಇಷ್ಟೊಂದು ಹಾಳಾಗಲು ಸಾಧ್ಯವಾಗುತ್ತಿರಲಿಲ್ಲ. ನಾವು ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಕಾಲಮಾನದ ಈ ದುರಂತಗಳಿಗೆ ನಾವು ಹೊಣೆ ಎನ್ನುವುದನ್ನು ಎಚ್ಚರದಿಂದ ಸ್ವೀಕರಿಸಬೇಕು. ಇಲ್ಲದಿದ್ದರೆ ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳವವರಾಗುತ್ತೇವೆ' ಎಂದರು.

ವೀಚಿ, ಪ್ರೊ.ಎಸ್.ಜಿ.ಸಣ್ಣಗುಡ್ಡಯ್ಯ, ಪ್ರೊ.ಕೆ.ಆರ್.ನಾಯಕ್ ಈ ನಾಡಿನ ಸಾಕ್ಷಿ ಪ್ರಜ್ಞೆ‌ಯಾಗಿದ್ದರು. ಅನ್ಯಾಯದ ವಿರುದ್ಧ ಬರೀ ಪ್ರತಿಭಟನೆ ಮಾಡದೆ ಕೋರ್ಟ್‌ನಲ್ಲಿಯೂ ನ್ಯಾಯಕ್ಕಾಗಿ ಹೋರಾಡಿದ್ದರು. ಮೂರು ಜನ ಸರಳವಾಗಿ, ಬದ್ಧತೆಯೊಂದಿಗೆ ಜೀವಿಸಿ, ಹಲವರಿಗೆ ಮಾರ್ಗದರ್ಶಕರಾಗಿದ್ದರು ಎಂದು ಸ್ಮರಿಸಿದರು.

ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಸ್.ನಾಗಣ್ಣ, ಲೇಖಕ ಎಸ್.ಗಂಗಾಧರಯ್ಯ, ಪ್ರಾಧ್ಯಾಪಕಿ ಗೀತಾ ವಸಂತ ಮಾತನಾಡಿದರು. ಲೇಖಕ ಎಚ್.ದಂಡಪ್ಪ, ಪ್ರತಿಷ್ಠಾನದ ಎಂ.ಎಚ್.ನಾಗರಾಜು, ಎ.ಓ.ನರಸಿಂಹಮೂರ್ತಿ, ಬಿ.ಮರುಳಯ್ಯ ಹಾಜರಿದ್ದರು.

ಪ್ರಶಸ್ತಿ ಪಡೆದವರು ಲೇಖಕ ಬಿ.ಜನಾರ್ದನ ಭಟ್‌ ಅವರಿಗೆ ವೀಚಿ ಸಾಹಿತ್ಯ ಪ್ರಶಸ್ತಿ ಲೇಖಕರಾದ ರವಿಕುಮಾರ್ ನೀಹ ದಯಾನಂದ ಅವರಿಗೆ ವೀಚಿ ಯುವ ಸಾಹಿತ್ಯ ಪ್ರಶಸ್ತಿ ತತ್ವಪದ ಗಾಯಕ ಮರಿರಂಗಯ್ಯ ಬಿದಲೋಟಿ ಅವರಿಗೆ ವೀಚಿ ಜಾನಪದ ಪ್ರಶಸ್ತಿ ಅಕ್ಷರ ವಿನ್ಯಾಸಕಾರರಾದ ಪಿ.ಉಮಾದೇವಿ ಅವರಿಗೆ ಕನಕ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.