ADVERTISEMENT

ತೋವಿನಕೆರೆ: ಮೇ ತಿಂಗಳಲ್ಲೇ ದಾಖಲೆ ಮಳೆ

ವಾಡಿಕೆ ಮಳೆ ಕೇವಲ 78.5 ಮಿ.ಮೀ.: ಈಗಾಗಲೇ 254 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:42 IST
Last Updated 22 ಮೇ 2024, 5:42 IST

ಪ್ರಜಾವಾಣಿ ವಾರ್ತೆ

ತೋವಿನಕೆರೆ: ಮೇ ತಿಂಗಳಲ್ಲಿ ಇಪ್ಪತ್ತು ವರ್ಷಗಳಿಂದ ಕಾಣದ ದಾಖಲೆ ಮಳೆ ಈ ವರ್ಷ ಬಂದಿದೆ.

2022ರಲ್ಲಾದ 241 ಮಿ.ಮೀ ಮಳೆಯೇ ಇದುವರೆಗೆ ಅತಿ ಹೆಚ್ಚು ಮಳೆಯಾಗಿತ್ತು. ಅದರೆ ಈ ವರ್ಷ ಕೇವಲ 6 ದಿನದಲ್ಲಿ 292 ಮಿ.ಮೀ ಮಳೆ ಸುರಿದು ಹಿಂದಿನ ದಾಖಲೆಯನ್ನು ಮೀರಿಸಿದೆ.

ADVERTISEMENT

ಸಾಮಾನ್ಯವಾಗಿ ಮೇ ತಿಂಗಳ ವಾಡಿಕೆ ಮಳೆ ಕೇವಲ 78.5 ಮಿ.ಮೀ. ಈ ಬಾರಿ ಭರಣಿ ಮಳೆ 37.8 ಮಿ.ಮೀ ಬಿದ್ದಿದ್ದರೆ ಕೃತಿಕ ಮಳೆ 254.2 ಮಿ.ಮೀ ಸುರಿದಿದೆ.

ಸೋಮವಾರ ಸಂಜೆ ತೋವಿನಕೆರೆಯಲ್ಲಿ ನಿಮಿಷಕ್ಕೆ 2 ಮಿ.ಮೀ ಲೆಕ್ಕದಲ್ಲಿ ಮಳೆ ಸುರಿಯಿತು. ಕೊರಟಗೆರೆ ತಾಲ್ಲೂಕಿನ ವಾರ್ಷಿಕ ವಾಡಿಕೆ ಮಳೆ 637 ಮಿ.ಮೀಯಾಗಿದ್ದು, ಈಗಾಗಲೇ ಶೇ 45ರಷ್ಟು ಮಳೆ ಬಂದಿದೆ.

ತೋವಿನಕೆರೆ ಬಸ್ ನಿಲ್ದಾಣದ ಮಧುಗಿರಿ ರಸ್ತೆಯಲ್ಲಿರುವ ಹಾಲು ಉತ್ಪಾದಕರ ಸಂಘದ ಕಟ್ಟಡ, ಧಾನ್ಯ ಮಾರಾಟ ಮಳಿಗೆಗೆ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟವಾಗಿದೆ. ಮಳಿಗೆಗಳು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೂ ನೀರು ನುಗ್ಗಿದೆ.

ಕೃತಿಕ ಮಳೆಯಲ್ಲಿ ರೈತರು ಹೊನ್ನಾರು ಹೂಡುವುದಿಲ್ಲ. ಈ ವರ್ಷ ಉತ್ತಮ ಮಳೆ ಬರುತ್ತಿದ್ದು, ಜ್ಯೋತಿಷಿಗಳ ಸಲಹೆ ಪಡೆದು ಹೆಸರು ಬಲದ ಮೇಲೆ ಹೊನ್ನಾರು ಹೂಡುತ್ತಿದ್ದಾರೆ.

ನೀರಿಗಾಗಿ ಜನವರಿ ನಂತರ ನೂರಾರು ಹೊಸ ಕೊಳವೆ ಬಾವಿ ಕೊರಸಿದ್ದರೂ ಶೇ 50ರಷ್ಟರಲ್ಲಿ ನೀರು ಬರಲಿಲ್ಲ. ಶೇ ಮೂವತ್ತರಷ್ಟು ಜಮೀನುಗಳ ಉಳುಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.