ADVERTISEMENT

ಮತ್ತೆ ಚೇತರಿಸಿದ ಕೊಬ್ಬರಿ ಬೆಲೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 14:19 IST
Last Updated 18 ಸೆಪ್ಟೆಂಬರ್ 2024, 14:19 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ಕೊಬ್ಬರಿ ಬೆಲೆಯಲ್ಲಿ ಹಾವು– ಏಣಿ ಆಟ ಮುಂದುವರಿದಿದ್ದು, ತಿಪಟೂರು ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ ಬುಧವಾರ ಮತ್ತೆ ಚೇತರಿಕೆ ಕಂಡಿದೆ.

ಕೊಬ್ಬರಿ ಧಾರಣೆ ಕ್ವಿಂಟಲ್‌ ₹14,446ಕ್ಕೆ ಏರಿಕೆ ಕಂಡಿದೆ. ಕನಿಷ್ಠ ₹13,300ಕ್ಕೆ ಮಾರಾಟವಾಗಿದ್ದು, 2,690 ಕ್ವಿಂಟಲ್ (6,258 ಚೀಲ) ಆವಕವಾಗಿತ್ತು.

ಕಳೆದ ಬುಧವಾರ (ಸೆ.11) ಹರಾಜಿನಲ್ಲಿ ಕ್ವಿಂಟಲ್ ₹15 ಸಾವಿರ ದಾಟಿತ್ತು. ಬೆಲೆ ಏರಿಕೆ ಕಂಡು ರೈತರ ಮುಖದಲ್ಲಿ ನೆಮ್ಮದಿ ಮೂಡಿತ್ತು. ಆದರೆ ಮೂರು ದಿನಗಳ ನಂತರ (ಸೆ.14ರಂದು) ನಡೆದ ಹರಾಜಿನಲ್ಲಿ ಬೆಲೆ ದಿಢೀರ್ ಕುಸಿತ ಕಂಡಿತ್ತು. ಕ್ವಿಂಟಲ್ ದರ ₹13,700ಕ್ಕೆ ಇಳಿಕೆಯಾಗಿತ್ತು. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು.

ADVERTISEMENT

ಒಂದೇ ವಾರದಲ್ಲಿ ಒಮ್ಮೆ ಏರುವುದು, ಮತ್ತೊಮ್ಮೆ ಇಳಿಕೆಯಾಗುವುದನ್ನು ಕಂಡು ರೈತರು ಉಸಿರು ಬಿಗಿಹಿಡಿದು ನಿಲ್ಲುವಂತಾಗಿತ್ತು. ಇಂದಿನ ಹರಾಜಿನಲ್ಲಿ ಎಲ್ಲಿ ಬೆಲೆ ಕುಸಿಯುತ್ತದೊ ಎಂಬ ಆತಂಕದಲ್ಲೇ ಇದ್ದರು. ಕ್ವಿಂಟಲ್ ₹14 ಸಾವಿರ ದಾಟಿರುವುದು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಮುಂದಿನ ವಾರಗಳಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವುದೇ? ಇಲ್ಲವೆ ಏರಿಳಿತ ಮುಂದುವರಿಯುವುದೇ? ಎಂಬ ಲೆಕ್ಕಾಚಾರದಲ್ಲಿ ರೈತರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.