ತುಮಕೂರು: ವಿದ್ಯೆ ನೀಡಿದ ಗುರುಗಳನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಮುಖಂಡ ಕೆ.ಬಿ.ಬೋರೇಗೌಡ ಹೇಳಿದರು.
ತಾಲ್ಲೂಕಿನ ಹೆಬ್ಬೂರಿನಲ್ಲಿ ನಡೆದ ಗಣಪತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು.
‘ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನನಗೆ ಓದುವ ಸಂದರ್ಭದಲ್ಲಿ ನನ್ನ ಗುರುಗಳು ಪ್ರೋತ್ಸಾಹ ನೀಡಿದರು. ಆ ನೆರವಿನಿಂದ ಇಂದು ನಿಮ್ಮ ಮುಂದೆ ಇದ್ದೇನೆ. ಯಾರೇ ಆಗಲಿ ಗುರುಗಳ ಉಪಕಾರವನ್ನು ನೆನೆಯಬೇಕು’ ಎಂದರು.
‘ನೋಟ್ ಬುಕ್ ವಿತರಿಸುವುದು ನೀವು ಸಹ ಮುಂದೆ ಸ್ಫೂರ್ತಿಯಿಂದ ಬೇರೆಯವರಿಗೆ ಸಹಾಯ ಮಾಡುವ ಉದ್ದೇಶದಿಂದಷ್ಟೇ. ಇದೊಂದು ನನ್ನ ಅಳಿಲು ಸೇವೆಯಷ್ಟೇ’ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೆಂಕಟಯ್ಯ ಮಾತನಾಡಿ,‘ ಈಗಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದೆ. ವಿದ್ಯಾರ್ಥಿ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಣ ಪಡೆಯುವುದು ಸಾಧನೆ ಮಾಡಲು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶಂಕರ್,‘ ಮಾಧ್ಯಮ ಮತ್ತು ತಂತ್ರಜ್ಞಾನ ಅಬ್ಬರ ವಿದ್ಯಾರ್ಥಿಗಳ ಏಕಾಗ್ರತೆಗೆ ಸವಾಲಾಗಿವೆ. ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು’ ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ಪಾಂಡುರಂಗಶೆಟ್ಟಿ, ಮುಖ್ಯ ಶಿಕ್ಷಕರಾದ ತಿಮ್ಮರಾಜು, ಕೆ.ಎಸ್.ರಾಧಾಮಣಿ ಮಾತನಾಡಿದರು. ಎಂ.ಜಿ.ಪಾರ್ಥಸಾರತಿ, ಕಾಲೇಜಿನ ಪುಟ್ಟಸ್ವಾಮಿ, ಎಂ.ಶಂಕರಪ್ಪ, ಆರ್.ಸ್ಫೂರ್ತಿ, ಪ್ರೌಢಶಾಲೆ ವಿಭಾಗದ ಕೆ.ತಿಪ್ಪೇಸ್ವಾಮಿ, ಎಲ್.ಉಮಾದೇವಿ, ಓಂಕಾರಸ್ವಾಮಿ, ಎಚ್.ಓ.ಸಂತೋಷ್ ಇದ್ದರು.
ಎಚ್.ಎನ್.ವೆಂಕಟೇಶ್ ಸ್ವಾಗತಿಸಿದರು. ಟಿ.ಸಿ.ಬಸವರಾಜು ವಂದಿಸಿದರು. ಕೆ.ತಿಪ್ಪೇಸ್ವಾಮಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.