ತುಮಕೂರು: ನಗರದ ತೋಟಗಾರಿಕಾ ಇಲಾಖೆಯ ಪಕ್ಕದಲ್ಲಿ, ಬಿ.ಎಚ್.ರಸ್ತೆಗೆ ಹೊಂದಿಕೊಂಡಂತೆ ಇರುವ ಹಾಪ್‌ಕಾಮ್ಸ್ ಮಳಿಗೆಯನ್ನು ಮತ್ತೆ ಪ್ರಾರಂಭಿಸಲಾಗಿದೆ.
ತೋಟಗಾರಿಕಾ ಇಲಾಖೆಯಿಂದ ನಡೆಯುತ್ತಿದ್ದ ಮಳಿಗೆಯನ್ನು ಕಳೆದ ಹಲವು ತಿಂಗಳುಗಳಿಂದ ಮುಚ್ಚಲಾಗಿತ್ತು. ‘ರಸ್ತೆಯ ಕೆಳಭಾಗದಲ್ಲಿ ಮಳಿಗೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುತ್ತಿಲ್ಲ’ ಎಂಬ ಕಾರಣಕ್ಕೆ ಅಧಿಕಾರಿಗಳು ಹಾಪ್‌ಕಾಮ್ಸ್ ಮಳಿಗೆ ಬಂದ್ ಮಾಡಿದ್ದರು.
ನಗರದಲ್ಲಿ ‘ಬಾಗಿಲು ಮುಚ್ಚಿರುವ ಹಾಪ್‌ಕಾಮ್ಸ್ ಮಳಿಗೆ’ಗಳ ಕುರಿತು ‘ಪ್ರಜಾವಾಣಿ’ಯಲ್ಲಿ ಅ. 14ರಂದು ಸಮಗ್ರ ವರದಿ ಪ್ರಕಟವಾಗಿತ್ತು. ವರದಿಯ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತೆ ಹಾಪ್‌ಕಾಮ್ಸ್ ಮಳಿಗೆ ಶುರು ಮಾಡಿದ್ದಾರೆ. ಹಣ್ಣು, ತರಕಾರಿ ಮಾರಾಟ ಪುನಃ ಪ್ರಾರಂಭವಾಗಿದೆ.
ವಿವಿಧೆಡೆ ಮುಚ್ಚಿರುವ ಹಾಪ್‌ಕಾಮ್ಸ್ ಮಳಿಗೆಗಳನ್ನು ಮತ್ತೆ ಪ್ರಾರಂಭಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ನಗರದ ವಿವಿಧ ಕಡೆಗಳಲ್ಲಿ ಈಗಾಗಲೇ ಮುಚ್ಚಿದ್ದ, ಬಂದ್ ಮಾಡುವ ಹಂತದಲ್ಲಿದ್ದ ಮಳಿಗೆಗಳ ಪ್ರಾರಂಭಕ್ಕೆ ಅಧಿಕಾರಿಗಳು ಆಸಕ್ತಿ ತೋರುತ್ತಿದ್ದಾರೆ. ಹಾಪ್‌ಕಾಮ್ಸ್ ಮಳಿಗೆಗಳು ಮತ್ತೆ ಹಳೆಯ ಸ್ಥಿತಿಗೆ ಮರಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.