ADVERTISEMENT

ತುಮಕೂರು: ಮತಪಟ್ಟಿಗೆ ಅತಿಥಿ ಉಪನ್ಯಾಸಕರ ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 5:11 IST
Last Updated 6 ಡಿಸೆಂಬರ್ 2023, 5:11 IST
ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮಂಗಳವಾರ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಟಿ.ಎಸ್.ಸುನಿಲ್ ಪ್ರಸಾದ್, ವೈ.ಎಚ್.ಹುಚ್ಚಯ್ಯ ಮೊದಲಾದವರು ಭಾಗವಹಿಸಿದ್ದರು
ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮಂಗಳವಾರ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಟಿ.ಎಸ್.ಸುನಿಲ್ ಪ್ರಸಾದ್, ವೈ.ಎಚ್.ಹುಚ್ಚಯ್ಯ ಮೊದಲಾದವರು ಭಾಗವಹಿಸಿದ್ದರು   

ತುಮಕೂರು: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಅತಿಥಿ ಉಪನ್ಯಾಸಕರು ಸೇರಿದಂತೆ ಎಲ್ಲಾ ಉಪನ್ಯಾಸಕರ ಸೇರ್ಪಡೆಗೆ ಅವಕಾಶ ಮಾಡಿಕೊಡುವಂತೆ ಬಿಜೆಪಿ ಮುಖಂಡರು, ಅತಿಥಿ ಉಪನ್ಯಾಸಕರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದು, ಹಿಂದಿನ ಚುನಾವಣೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡಿದ್ದು, ಈ ಬಾರಿಯೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬೇಕು. ಹೆಸರು ನೋಂದಣಿಗೆ ದಿನಾಂಕ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಐಟಿಐ, ಡಿಪ್ಲೊಮಾ, ಪ್ಯಾರಾಮೆಡಿಕಲ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳ ಶಿಕ್ಷಕರ ಹೆಸರನ್ನೂ ಪಟ್ಟಿಗೆ ಸೇರಿಸಬೇಕು. ಪ್ರೌಢಶಾಲೆ ಹಾಗೂ ಅದಕ್ಕೂ ಮೇಲ್ಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿನ 6 ವರ್ಷಗಳಲ್ಲಿ ಕನಿಷ್ಠ 3 ವರ್ಷ ಬೋಧನೆಯಲ್ಲಿ ತೊಡಗಿಸಿಕೊಂಡವರನ್ನು ಮತದಾರರ ಪಟ್ಟಿಗೆ ಸೇರಿಸಲು ಚುನಾವಣಾ ಆಯೋಗವೇ ಅವಕಾಶ ನೀಡಿದೆ. ಅದರಂತೆ ಅರ್ಹರನ್ನು ಸೇರ್ಪಡೆ ಮಾಡಬೇಕು. ಅತಿಥಿ ಉಪನ್ಯಾಸಕರ ನೋಂದಣಿಗೆ ಗೊಂದಲ ಹಾಗೂ ತಡೆಯಾಗಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ಮೊದಲ ಹಂತದ ಮತದಾರರ ನೋಂದಣಿ ಕಾರ್ಯ ಮುಕ್ತಾಯವಾಗಿದ್ದು, ಅತಿಥಿ ಉಪನ್ಯಾಸಕರು ನೋಂದಣಿಗೆ ಅರ್ಹರಲ್ಲ ಎಂದು ಆದೇಶಿಸಿರುವುದು ಕಾನೂನು ಬಾಹಿರವಾಗಿದೆ. ಈ ಆದೇಶ ಮಾರ್ಪಡಿಸಿ 6 ವರ್ಷಗಳಲ್ಲಿ 3 ವರ್ಷ ಬೋಧನೆ ಮಾಡಿದವರಿಗೆ ಅವಕಾಶ ನೀಡಬೇಕು. ಈ ಹಿಂದಿನ ಚುನಾವಣೆಗಳಲ್ಲಿ ಅತಿಥಿ ಉಪನ್ಯಾಸಕರು ಮತದಾನ ಮಾಡಿದ್ದಾರೆ. ಹಾಗಾಗಿ ಕಾನೂನಾತ್ಮಕವಾಗಿಯೇ ಅವಕಾಶ ಮಾಡಿಕೊಡಬೇಕು ಎಂದು ಕೋರಿಕೊಂಡಿದ್ದಾರೆ.

ತುಮಕೂರು ವಿ.ವಿ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಎಸ್.ಸುನಿಲ್ ಪ್ರಸಾದ್, ಅತಿಥಿ ಉಪನ್ಯಾಸಕರಾದ ಕೆ.ಎಚ್.ಧರ್ಮವೀರ, ಎಂ.ಟಿ.ಮಲ್ಲಿಕಾರ್ಜುನಯ್ಯ, ಎಚ್.ಹನುಮಂತರಾಯಪ್ಪ, ಎಂ.ಶಿವಯ್ಯ, ಜಯರಾಮ್, ರಂಗನಾಥ್ ಮೊದಲಾದವರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.