ADVERTISEMENT

ಹುಳಿಯಾರು ಕೆರೆ ದಂಡೆ ವಸತಿ ವಂಚಿತ ಕುಟುಂಬಗಳಿಗೆ ಶೀಘ್ರ ನಿವೇಶನ: ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 14:08 IST
Last Updated 16 ನವೆಂಬರ್ 2024, 14:08 IST
ಕೆರೆ ತುಂಬಿದಾಗ‌ ಕುಸಿದು ಬಿದ್ದ ಮನೆ
ಕೆರೆ ತುಂಬಿದಾಗ‌ ಕುಸಿದು ಬಿದ್ದ ಮನೆ    

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಶಂಕರಪುರ ಬಡಾವಣೆಯ ತಗ್ಗಿನಲ್ಲಿರುವ ಕೆರೆ ದಂಡೆಯಲ್ಲಿ ವಾಸವಾಗಿರುವ ವಸತಿ ವಂಚಿತ ಅಲೆಮಾರಿ ಹಾಗೂ ತಳ ಸಮುದಾಯದ 87 ಕುಟುಂಬಗಳಿಗೆ ಸುರಕ್ಷಿತ ಪ್ರದೇಶದಲ್ಲಿ ನಿವೇಶನ ಕಲ್ಪಿಸಿಕೊಡುವ ಸಲುವಾಗಿ ತಹಶೀಲ್ದಾರ್ ಕೆ. ಪುರಂದರ್ ಶನಿವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿ ಕಮ್ಮಾರ, ತಳವಾರ, ಜೋಗ್ಯೇರ, ಪಿಂಜಾರ, ಬಂಜಾರ, ಕರಡಿ ಕಲಂದರ ಹಾಗೂ ಮುರ್ಶೆದಾ ಸೇರಿದಂತೆ ಹಲವು ತಳವರ್ಗ ಮತ್ತು ಅಲೆಮಾರಿ ಸಮುದಾಯಗಳ ವಸತಿ ವಂಚಿತರು ವಾಸಿಸುತ್ತಿದ್ದಾರೆ. ಕೆರೆಗೆ ಹೇಮೆ ನೀರು ಹರಿದು ಕೆರೆ ತುಂಬಿದರೆ, ಈ ಜನರ ಬದುಕು ಕೆರೆಯಂಗಳದಲ್ಲಿ ಕೊಚ್ಚಿ ಹೋಗಲಿದೆ.

ಹವಮಾನ ವೈಪರೀತ್ಯಗಳಿಂದ ತುರ್ತುಸ್ಥಿತಿ ತಲೆದೋರಿದರೆ ತಕ್ಷಣ ಇಲ್ಲಿ ವಾಸವಿರುವ ಕುಟುಂಬಗಳಿಗೆ ಪಟ್ಟಣದ ಅಂಬೇಡ್ಕರ್ ಭವನ ಸೇರಿದಂತೆ ಹಲವೆಡೆ ಗಂಜಿ-ಕೇಂದ್ರಗಳನ್ನು ಸ್ಥಾಪಿಸಿ, ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಹಶೀಲ್ದಾರ್‌ ಸೂಚಿಸಿದರು.

ADVERTISEMENT

ನಾಗರತ್ನ ಬಾಯಿ, ಬಷೀರ್ ಸಾಬ್, ಕುಮಾರ, ಷರೀಫಮ್ಮ, ದೊಡ್ಡಯ್ಯ, ಮುಮ್ತಾಜ಼್, ನಾಗಮ್ಮ, ಸಣ್ಣಲಕ್ಷ್ಮಮ್ಮ, ಎಲ್ಲಮ್ಮ, ರಹಮತಿ, ಹಸೀನಾ ಬಿ., ಅನ್ವರ್, ಗೌಸ್ ಪೀರ್ ಮುಂತಾದ ಕೆರೆ ದಂಡೆಯಲ್ಲಿ ತಾತ್ಕಾಲಿಕವಾಗಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ನಿರಾಶ್ರಿತರೊಂದಿಗೆ ತಹಸೀಲ್ದಾರ್ ಕೆ. ಪುರಂದರ್ ಮಾತನಾಡಿ, ಕುಂದು-ಕೊರತೆ ಆಲಿಸಿದರು.

ಹುಳಿಯಾರು ಕೆರೆ ದಂಡೆಯಲ್ಲಿ ವಾಸವಿರುವ ಈ 87 ವಸತಿ ವಂಚಿತ ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸಿಕೊಡುವ ಸಲುವಾಗಿ, ಕಂಪನಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಈ ಜಾಗ ಮಂಜೂರಾತಿಗೆ ನವೆಂಬರ್ ಒಳಗೆ ಉಪ-ವಿಭಾಗಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿ, ತ್ವರಿತವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಕೆರೆ ದಡದ ತಾತ್ಕಾಲಿಕ ಆಸರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.