ತುಮಕೂರು: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗ್ಗೆ ಲಾರಿ ಮತ್ತು ಟೆಂಪೋ ಟ್ರ್ಯಾಕ್ಸ್ ಮಧ್ಯೆ ನಡೆದ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದು, 13 ಜನ ಗಾಯಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ವಿವಿಧೆಡೆಗಳಿಂದ ಬೆಂಗಳೂರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.ಸಿಂಧನೂರು, ಲಿಂಗಸೂರು, ದೇವದುರ್ಗದ ನಿವಾಸಿಗಳು ಎಂದು ತಿಳಿದು ಬಂದಿದೆ. ಟೆಂಪೊಗೆ ಲಾರಿ ಡಿಕ್ಕಿ ಹೊಡೆದಿದೆ.
ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಎಲ್ಲರೂ ಕೂಲಿ ಕಾರ್ಮಿಕರು ಎನ್ನಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ಗಾಯಗೊಂಡವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿದೆ.
ಸಂದೀಪ್, ಬಾಲಾಜಿ, ಅನಿಲ್ ಎಂಬ ಮೂರು ಜನ ಮಕ್ಕಳು ಸೇರಿದಂತೆ ಒಟ್ಟು 12 ಮಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವದುರ್ಗ ತಾಲ್ಲೂಕಿನ ನಾಗಮ್ಮ (50) ಮತ್ತು ಉಮೇಶ್ (28) ಎಂಬುವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾನ್ವಿ, ಸಿರವರ ತಾಲ್ಲೂಕಿನವರು
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ಮೃತಪಟ್ಟವರು ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ಸಿರವರ ತಾಲ್ಲೂಕಿಗೆ ಸೇರಿದವರು.
ಟೆಂಪೋ ಚಾಲಕ ಕೃಷ್ಣಪ್ಪ, ಸುಜಾತ, ಬಾಲಕ ವಿನೋದ, ಲಕ್ಷ್ಮಿ ಸಹಿತ ಮೃತರ ವಿವರ ಗೊತ್ತಾಗಿದೆ. ಉಳಿದವರ ವಿವರ ಖಚಿತವಾಗಿಲ್ಲ.
ದುರುಗಮ್ಮ, ಬಾಲರಾಜು, ಸಂದೀಪ್, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜು, ಮೌನಿಕ, ನಾಗಪ್ಪ, ನಾಗಮ್ಮ, ವಸಂತ್, ವೈಷ್ಣವಿ, ವೀರಭದ್ರ, ಲತಾ ಅಪಘಾತದಲ್ಲಿ ಗಾಯಗೊಂಡವರು.
ಇಬ್ಬರು ಟೆಂಪೊ ಮೇಲೆ ಮಲಗಿದ್ದರು..
ನಾನು ಡ್ರೈವರ್ ಪಕ್ಕ ಕೂತಿದ್ದೆ, ಟೆಂಟೊ ನಿಧಾನಕ್ಕೆ ಹೋಗ್ತಿತ್ತು, ಲಾರಿ ಡಿಕ್ಕಿ ಹೊಡೆದ ಮೇಲೆ ಟೆಂಪೊ ಪಲ್ಟಿ ಹೊಡೆದುಬಿಡ್ತು..
ಹೀಗೆ ಟೆಂಪೊದಲ್ಲಿದ್ದ 16 ವರ್ಷದ ಶಿವರಾಜು ಆತಂಕದಲ್ಲಿಯೇ ಮಾತನಾಡಿದರು.
ಇಪ್ಪತ್ತು ಜನರು ಟೆಂಪಪೊದಲ್ಲಿ ಇದ್ದರು. ಭರ್ತಿ ಆಗಿದ್ದರಿಂದ ಮೌಲ ಮತ್ತೆ ಇನ್ನೊಬ್ಬರು ಟೆಂಪೊ ಮೇಲೆ ಮಲಗಿದ್ದರು. ಟೆಂಪೊ ಮೇಲೆ ಮಲಗಿದ್ದವರಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು
ಮೃತಪಟ್ಟ ಒಂಬತ್ತು ಜನರಲ್ಲಿ ಇಬ್ಬರು ಮಕ್ಕಳಿದ್ದಾರೆ. ಎಲ್ಲರು ಸಂಬಂಧಿಕರೇ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಗಾಯಾಳುಗಳನ್ನು ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಟೆಂಪೋದಲ್ಲಿ ಸುಮಾರು 24 ಜನರು ಸಂಚರಿಸುತ್ತಿದ್ದರು. ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಗೊಂಡ ಇಬ್ಬರನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದರು.
ಗಾಯಾಳುಗಳಿಗೆ ವ್ಯವಸ್ಥಿತವಾಗಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಅಪಘಾತದಲ್ಲಿ ತಾಯಿ ಮಗು ಸಾವು
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲಳೇನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ಮೃತಪಟ್ಟವರಲ್ಲಿ ತಾಯಿ, ಮಗು ಸೇರಿದ್ದಾರೆ.
ರಾಯಚೂರು ಜಿಲ್ಲೆಯ ಸಿರವಾರತಾಲ್ಲೂಕಿನ ಕುರುಕುಂದ ಗ್ರಾಮದ ಸುಜಾತ, ವಿನೋದ್ ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಸುಜಾತ ಅವರ ಅಕ್ಕ ಲಲಿತಾ, ಮತ್ತೊಬ್ಬ ಮಗ ಸಂದೀಪ್ ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಹರಂ ಹಬ್ಬಕ್ಕೆ ಹೋಗಿದ್ದರು
ರಾಯಚೂರಿನಿಂದ ತುಮಕೂರಿನ ಕ್ಯಾತ್ಸಂದ್ರದ ಬಳಿಯ ಬಡ್ಡಿಹಳ್ಳಿ ಹತ್ತಿರ ಕೆಲಸ ಮಾಡಲು ಬರುತ್ತಿದ್ದ ಮೂರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರುಗಮ್ಮ (45) ಅವರ ಮಕ್ಕಳಾದ ಶಿವರಾಜ್ (16), ವೈಷ್ಣವಿ ( 12) ಅವರು ಅಪಘಾತವಾದ ಟೆಂಪೋದಲ್ಲಿ ಇದ್ದರು. ಬಡ್ಡಿಹಳ್ಳಿ ಹತ್ತಿರ ಕಳೆದ ಮೂರು ವರ್ಷದಿಂದ ಕೆಲಸ ಮಾಡಿಕೊಂಡು ಇದ್ದರು. ತೋಟ, ಗಾರೆ ಕೆಲಸ ಮಾಡುತ್ತಿದ್ದರು. ದುರುಗಮ್ಮ ಅವರ ಪತಿ ತುಮಕೂರಿನಲ್ಲಿಯೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.