ಹುಳಿಯಾರು: ಇನ್ನೇನು 243 ಶಿರಾ-ಹುಳಿಯಾರು ಹೆದ್ದಾರಿ ಕಾಮಗಾರಿ ಮುಗಿದೇ ಹೋಯಿತು… ಇದು ಇಂದಿನ ಮಾತಲ್ಲ ಕಳೆದ 3 ವರ್ಷಗಳ ಹಿಂದಿನ ಮಾತು. ಆದರೂ ಕಾಮಗಾರಿ ಮಾತ್ರ ಇನ್ನೂ ಮುಕ್ತಾಯಗೊಳ್ಳದೆ ಸಮಸ್ಯೆಗಳ ಮೇಲೆ ಸಮಸ್ಯೆ ಸೃಷ್ಟಿಯಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸ್ಥಿತಿ ಕಂಡು ಬರುವುದು 234 ಹೆದ್ದಾರಿಯ ಭಾಗವಾದ ಹುಳಿಯಾರು ಪಟ್ಟಣದ ಹೊರವಲಯದ ಎಸ್ಎಲ್ಆರ್ ಬಂಕ್ ಹಾಗೂ ರಾಮಗೋಪಾಲ್ ವೃತ್ತದ ಬಳಿ ಕಾಮಗಾರಿ ಅಪೂರ್ಣಗೊಂಡಿದೆ. ಜಲ್ಲಿ ಹಾಗೂ ಜಲ್ಲಿಯ ಪುಡಿ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ಜನರು ದೂಳಿನ ಮಜ್ಜನದಲ್ಲಿ ಪರದಾಡು
ವಂತಾಗಿದೆ.
2017 ಡಿಸೆಂಬರ್ ತಿಂಗಳಿನಲ್ಲಿ 234ರ ಶಿರಾ –ಹುಳಿಯಾರು ಹೆದ್ದಾರಿ ಕಾಮಗಾರಿ ಆರಂಭಗೊಂಡಿತು. ಕಾಮಗಾರಿ ಕುಂಟುತ್ತಾ ಸಾಗಿ ಕಳೆದ 2018ರ ಅಕ್ಟೋಬರ್‌ನಲ್ಲಿ ಹುಳಿಯಾರು ಪಟ್ಟಣ ತಲುಪಿತು. ತಲುಪಿದ ಭರದಲ್ಲಿ ಗುತ್ತಿಗೆ ಪಡೆದಿರುವ ಡಿಆರ್‌ಎನ್ ಸಂಸ್ಥೆ ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸುವ ನೆಪವೊಡ್ಡಿ ಪಟ್ಟಣದ ಸಮೀಪದ ಎಸ್ಎಲ್ಆರ್ ಬಂಕ್‌ನಿಂದ ಎಪಿಎಂಸಿವರೆಗಿನ ಡಾಂಬರ್ ರಸ್ತೆಯನ್ನು ಕಿತ್ತು ಹಾಕಿದರು. ಕೆಲಸ ಮಾತ್ರ ಕುಂಟುತ್ತಾ ಸಾಗಿ ಪಟ್ಟಣದ ರಾಮಗೋಪಾಲ್ ವೃತ್ತ, ಹೊರವಲಯದ ಎಸ್ಎಲ್ಆರ್
ಬಂಕ್ ವೃತ್ತ ಹಾಗೂ ಕಂಪನಹಳ್ಳಿ ಗ್ರಾಮದ ಬಳಿ ಮಾತ್ರ ಕಾಮಗಾರಿ ಅಸ್ತವ್ಯಸ್ತವಾಗಿದೆ.
ರಸ್ತೆ ಅಗೆದು ಜಲ್ಲಿ ಮತ್ತು ಜಲ್ಲಿ ಪುಡಿಯನ್ನು ಮಾತ್ರ ಹಾಕಿದ್ದಾರೆ. 2 ತಿಂಗಳಿನಿಂದ ಈ ಮೂರು ಕಡೆ ವಾಹನ ಸವಾರರಿಗೆ ಹಾಗೂ ದಾರಿ ಹೋಕರಿಗೆ ದೂಳಿನ ಮಜ್ಜನವಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಸವಾರರು ಬಂದರಂತೂ ಮುಂದೆ ಯಾವ ವಾಹನ ಬರುತ್ತಿದೆ ಎನ್ನುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕಣ್ಣಿನ ತುಂಬಾ ದೂಳು ತುಂಬಿಕೊಂಡು ಆರೋಗ್ಯ ಸಮಸ್ಯೆ ನಡುವೆ ಅಪಘಾತಗಳು ಸಹ ಸಂಭವಿಸುತ್ತಿವೆ. ಇನ್ನೂ ಲಾರಿ ಸೇರಿದಂತೆ ಭಾರಿ ವಾಹನಗಳು ಬಂದರೆ ಪಕ್ಕದಲ್ಲಿ ಹಾದು ಹೋಗುತ್ತಿರುವ ದ್ವಿಚಕ್ರ ವಾಹನಗಳ ಸವಾರರಿಗೆ ಕಲ್ಲು ಸಿಡಿದು ಗಾಯಗೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.