ತುಮಕೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ವಾತಂತ್ರ್ಯಚೌಕ ಹಾಗೂ ಮಂಡಿಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಅಧ್ವಾನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಶನಿವಾರ ಗುತ್ತಿಗೆದಾರರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
‘ಒಬ್ಬರು ಮೃತಪಟ್ಟಿದ್ದರು. ನಾನು ಅಲ್ಲಿಗೆ ತೆರಳುತ್ತಿದ್ದೆ. ಸ್ವಾತಂತ್ರ್ಯಚೌಕದಿಂದ ಮಂಡಿಪೇಟೆಗೆ ತೆರಳುವಾಗ ರಸ್ತೆ ಅಧ್ವಾನವಾಗಿತ್ತು. ಮುಂದೆ ಸ್ಮಾರ್ಟ್ ಸಿಟಿಯವರು ಮತ್ತು ಹಿಂದೆ ಪಾಲಿಕೆಯವರು ಕೆಲಸ ಮಾಡುತ್ತಿದ್ದಾರೆ. ಜನರು ಓಡಾಡಲು ಸಹ ಕಷ್ಟವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಗುತ್ತಿಗೆಯನ್ನು ಆಂಧ್ರಪ್ರದೇಶದವರಿಗೆ ನೀಡಿದ್ದಾರಂತೆ. ರಸ್ತೆ ಕಾಮಗಾರಿಯ ಅಧ್ವಾನದ ಬಗ್ಗೆ ಅಲ್ಲಿದ್ದ ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ಆತ ಅಸಂಬದ್ಧವಾಗಿ ಮತ್ತು ಉಡಾಫೆಯಿಂದ ಉತ್ತರಿಸಿದ. ಆಗ ಸಿಟ್ಟಿನಿಂದ ಏಟು ಕೊಟ್ಟೆ’ ಎಂದು ಶಿವಣ್ಣ ಸ್ಪಷ್ಟಪಡಿಸಿದರು.
‘ನಾವು ಎಂಟತ್ತು ತಿಂಗಳಿನಿಂದ ಬಾಯಿ ಮುಚ್ಚಿಕೊಂಡು ಇದ್ದೆವು. ನಗರದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎನ್ನುವ ಸ್ಥಿತಿ ಇದೆ. ಈಗ ಸಮಾಜ ಬೇಕಾ, ರಾಜಕೀಯ ಬೇಕಾ ಎನಿಸಿತು. ಸ್ಮಾರ್ಟ್ ಸಿಟಿ ಕಾಮಗಾರಿಗಳು ನಗರವನ್ನು ಅಧ್ವಾನಗೊಳಿಸಿವೆ’ ಎಂದು ಕಿಡಿಕಾರಿದರು.
ಬದುವಿನಂತೆ ರಸ್ತೆಗೆ ಮಣ್ಣನ್ನು ಸುರಿದಿದ್ದಾರೆ. ಇಂತಹ ಕಡೆಗಳಲ್ಲಿ ಜನರು ಹೇಗೆ ಓಡಾಡಬೇಕು. ನಾನು ಬೈದ ಮೇಲೆ ಆ ಮಣ್ಣನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಈ ಜಂಜಾಟದಿಂದ ಹೆಣವನ್ನು ನೋಡುವುದಕ್ಕೆ ಹೋಗಲು ಸಮಯ ಸಹ ಆಗಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.