ತುಮಕೂರು: ಸಿದ್ಧಗಂಗಾ ಮಠದ ಗೋ ಕಟ್ಟೆಗೆ ಬಿದ್ದು ಮೃತಪಟ್ಟ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪ್ರಕಟಿಸಿದರು.
ಮಠದ ಗೋ ಕಟ್ಟೆಗೆ ಬಿದ್ದು ನಾಲ್ವರು ಮೃತಪಟ್ಟಿರುವ ಸ್ಥಳಕ್ಕೆ ಸೋಮವಾರ ಭೇಟಿನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಸಿದ್ಧಗಂಗಾ ಮಠದಲ್ಲಿ ಇಂತಹ ಅವಘಡ ನಡೆಯಬಾರದಿತ್ತು. ದುರಾದೃಷ್ಟವಶಾತ್ ಈ ಘಟನೆ ನಡೆದು ಹೋಗಿದೆ. ಗೋ ಕಟ್ಟೆ ಸುತ್ತಲೂ ಮುಳ್ಳು ತಂತಿ ಬೇಲಿ ನಿರ್ಮಿಸಲು ಈಗಾಗಲೇ ಮಠದವರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕಾರ್ಯವನ್ನು ಮಠದವರೇ ಮುಂದುವರಿಸಲಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ಹೇಳಿದರು.
ಚಲನಚಿತ್ರ ನಟ ಉಪೇಂದ್ರ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಮತ್ತಿಬ್ಬರ ಮೃತದೇಹ ಪತ್ತೆ
ಗೋ ಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದ ಶಂಕರ್ (12), ಮಹದೇವಪ್ಪ (40) ಮೃತದೇಹಗಳು ಸೋಮವಾರ ಪತ್ತೆಯಾಗಿವೆ.
ಗೋಕಟ್ಟೆಯಲ್ಲಿ ಮುಳುಗಿ ಮಠದ ವಿದ್ಯಾರ್ಥಿ ನಿಲಯದ ಇಬ್ಬರು ವಿದ್ಯಾರ್ಥಿಗಳು ಮತ್ತು ಅವರನ್ನು ರಕ್ಷಿಸಲು ನೀರಿಗಿಳಿದಿದ್ದ ಪೋಷಕರು ಸೇರಿದಂತೆ ಒಟ್ಟು ನಾಲ್ವರು ಭಾನುವಾರ ಸಾವನ್ನಪ್ಪಿದ್ದರು.
ಮಠದ ವಿದ್ಯಾರ್ಥಿ ನಿಲಯದಲ್ಲಿದ್ದ ರಾಮನಗರದ ಹರ್ಷಿತ್ (12), ಚಿಕ್ಕಮಗಳೂರಿನ ಶಂಕರ್ (12) ಹಾಗೂ ಮಕ್ಕಳನ್ನು ಕಾಣಲು ಬಂದಿದ್ದ ಬೆಂಗಳೂರಿನ ಬಾಗಲಗುಂಟೆ ನಿವಾಸಿ ಲಕ್ಷ್ಮಿ (33), ಯಾದಗಿರಿ ಜಿಲ್ಲೆಯ ಮಹದೇವಪ್ಪ (40) ಗೋಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದರು. ಲಕ್ಷ್ಮಿ ಮತ್ತು ಹರ್ಷಿತ್ ಶವಗಳು ಭಾನುವಾರ ಪತ್ತೆಯಾಗಿದ್ದವು. ಶಂಕರ್, ಮಹದೇವಪ್ಪ ಮೃತದೇಹಗಳನ್ನು ಸೋಮವಾರ ಬೆಳಿಗ್ಗೆ ಹೊರ ತೆಗೆಯಲಾಯಿತು.
ಶಾಸಕರ ನೆರವು
ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ₹50 ಸಾವಿರ ಪರಿಹಾರವನ್ನು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ನೀಡಿದರು.
ಒಟ್ಟು ನಾಲ್ವರ ಕೃಟುಂಬಕ್ಕೆ ₹2 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಶಾಲಾ ಮುಖ್ಯಸ್ಥರು, ಗೋಕಟ್ಟೆ ನಿರ್ಮಾಣ ಮಾಡಿರುವ ರೈತರು ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.