ಮಧುಗಿರಿ: ‘ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಾಗಿ ರಾಜ್ಯ ಸರ್ಕಾರ ₹575 ಕೋಟಿ ಬಿಡುಗಡೆ ಮಾಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣಕ್ಕೆ ನೀರೊದಗಿಸುವ ತಾಲ್ಲೂಕಿನ ಸಿದ್ದಾಪುರ ಕೆರೆ ಮತ್ತು ಚೋಳೇನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು.
‘ಎರಡು ತಾಲ್ಲೂಕಿನ ಕೆರೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ಮುಂದಿನ ಮಳೆಗಾಲದ ಒಳಗಾಗಿ ಎತ್ತಿನಹೊಳೆ ಯೋಜನೆಯ ನೀರನ್ನು ಹರಿಸುವ ಮೂಲಕ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕು ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ತೆಗೆದು ಹಾಕಲಾಗುವುದು’ ಎಂದು ತಿಳಿಸಿದರು.
‘ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಅಲ್ಲಿಗೆ ಹೋಗಿರದಿದ್ದರೆ ಇನ್ನು 50 ವರ್ಷ ಕಳೆದರೂ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಯುತ್ತಿರಲಿಲ್ಲ’ ಎಂದು ತಿಳಿಸಿದರು.
‘ಅಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ ರೀತಿ ಇದೆ. ಹಾಸನ ಡಿ.ಸಿ. ಸತ್ಯಭಾಮ ಮತ್ತು ನಾನು ಇಲ್ಲದಿದ್ದರೆ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಎಂಜಿನಿಯರ್‌ಗಳು ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಈಗ ನೀರು ಲಿಫ್ಟ್ ಮಾಡಲು ರೆಡಿ ಇದ್ದು, ಕಾಲುವೆಗಳ ದುರಸ್ತಿ ಆಗಬೇಕಿದೆ. ಕಾಲುವೆಗಳ ದುರಸ್ತಿಗೆ ₹300 ಕೋಟಿ ಬಿಡುಗಡೆ ಮಾಡಿಸಲಾಗಿದೆ’ ಎಂದರು.
‘ಮಧುಗಿರಿ ತಾಲ್ಲೂಕಿನಲ್ಲಿ ಮಳೆ ಬಿದ್ದ ನೀರನ್ನು ಇಂಗಿಸುವ ಹಾಗೂ ತಡೆಗಟ್ಟಲು ಚೆಕ್‌ಡ್ಯಾಂ ಹಾಗೂ ಕೆರೆಗಳಿಗೆ ನೀರು ಹರಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಬಿಜವರ ಕೆರೆ ಕೋಡಿಯ ಸಮೀಪ ಹೋಗುತ್ತಿದ್ದ ನೀರನ್ನು ತಡೆ ಹಿಡಿಯಲು ಕಾಮಗಾರಿ ಕೆಲಸ ಮಾಡಲಾಗುತ್ತಿದೆ’ ಎಂದರು.
‘ಪಟ್ಟಣದ 1 ರಿಂದ 8ನೇ ವಾರ್ಡ್‌ವರೆಗೂ ಪಾದಯಾತ್ರೆ ಮೂಲಕ ಕುಂದು ಕೊರತೆ ಆಲಿಸುವ ಕಾರ್ಯಕ್ರಮವನ್ನು ಶೀಘ್ರವಾಗಿ ಹಮ್ಮಿಕೊಳ್ಳಲಾಗುವುದು. ಹಂತ - ಹಂತವಾಗಿ ಎಲ್ಲಾ ವಾರ್ಡ್‌ಗೂ ಭೇಟಿ ನೀಡುತ್ತೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶಿರಿನ್ ತಾಜ್, ತಾ.ಪಂ.ಇಒ ಲಕ್ಷ್ಮಣ್, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರ್ ನಾರಾಯಣ್, ಸದಸ್ಯ ಅಲೀಂ, ಎಂ.ವಿ ಗೋವಿಂದರಾಜು, ತಿಮ್ಮರಾಯಪ್ಪ, ಮಂಜುನಾಥ್ ಆಚಾರ್, ನಾಗಲತಾ ಲೋಕೇಶ್, ಶೋಭಾರಾಣಿ, ಶ್ರೀಧರ್, ಟಿ.ರಾಮಣ್ಣ, ಎಂ.ಜಿ. ಉಮೇಶ್, ಆನಂದ ಕೃಷ್ಣ, ಸುವರ್ಣಮ್ಮ, ಆನಂದ್, ಎಸ್.ಬಿ.ಟಿ ರಾಮು, ತಾ.ಪಂ ಇಒ ಲಕ್ಷ್ಮಣ್, ಮಧುಸೂದನ್, ಕಮಲಾ, ಸುರೇಶ್, ಮುಖ್ಯಾಧಿಕಾರಿ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.