ADVERTISEMENT

ತುಮಕೂರು | ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ: ಉದ್ಯಮಿಗೆ ₹61 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:07 IST
Last Updated 26 ಮೇ 2024, 15:07 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ₹3 ಕೋಟಿ ಲಾಭ ಗಳಿಸಬಹುದು ಎಂದು ನಂಬಿಸಿ ಉದ್ಯಮಿಯೊಬ್ಬರಿಗೆ ₹61.58 ಲಕ್ಷ ವಂಚಿಸಲಾಗಿದೆ.

ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದ ಎಚ್‌.ಆರ್‌.ರೇಣುಕಪ್ರಸಾದ್‌ ಎಂಬುವರು ಸೈಬರ್‌ ಆರೋಪಿಗಳ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವಿಡಿಯೊ ನೋಡಿ ಅಪರಿಚಿತ ವ್ಯಕ್ತಿಗಳ ಜತೆ ವಾಟ್ಸ್‌ ಆ್ಯಪ್‌ ಮುಖಾಂತರ ಚಾಟಿಂಗ್‌ ಮಾಡಿದ್ದಾರೆ. ನಂತರ ಅವರನ್ನು ‘ಎಸ್‌ಎಂಸಿ ಸ್ಟಾಕ್‌’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ.

‘ಎಸ್‌ಎಂಸಿ ಗ್ಲೋಬಲ್‌ ಸೆಕ್ಯುರಿಟಿಸ್‌’ ನಲ್ಲಿ ಬಂಡವಾಳ ಹೂಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ಒಡ್ಡಿದ್ದಾರೆ. ಶಿವಾಂಗಿ ಅಗರ್‌ವಾಲ್‌ ಎಂದು ಪರಿಚಯಿಸಿಕೊಂಡು ‘ಇನ್ಸ್‌ ಸ್ಯೂಷನಲ್‌ ಸರ್ಟಿಫಿಕೇಟ್‌ ಹಾಗೂ ಸೇಬಿ ನೋಂದಣಿ ಸಂಖ್ಯೆ’ ನೀಡಿದ್ದಾರೆ. ರೇಣುಕಪ್ರಸಾದ್‌ ಮೊದಲ ಬಾರಿಗೆ ಏ.29ರಂದು ₹50 ಸಾವಿರ ಹಣವನ್ನು ಸೈಬರ್‌ ವಂಚಕರು ತಿಳಿಸಿದ ಖಾತೆಗೆ ವರ್ಗಾಯಿಸಿದ್ದಾರೆ.

ADVERTISEMENT

ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಪ್ರೇರೇಪಿಸಿದ್ದಾರೆ. ಇದನ್ನು ನಂಬಿ ಮೇ 16ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಒಟ್ಟು ₹61,58,500 ಹಣ ವರ್ಗಾವಣೆ ಮಾಡಿದ್ದಾರೆ. ಮೋಸ ಹೋಗಿರುವುದು ಗಮನಕ್ಕೆ ಬಂದ ನಂತರ ಸೈಬರ್‌ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಯ ಮೆಟ್ಟಿಲು ಹತ್ತಿದ್ದು, ಪ್ರಕರಣ ದಾಖಲಿಸಲಾಗಿದೆ.

ಆನ್‌ಲೈನ್‌ ಕೆಲಸ: ಮಹಿಳೆಗೆ ₹1.27 ಲಕ್ಷ ಮೋಸ
ಆನ್‌ಲೈನ್‌ ಮೂಲಕ ಕೆಲಸ ಮಾಡುತ್ತಾ ಹಣ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಜಯನಗರ ನಿವಾಸಿ ಎಂ.ಎಸ್‌.ಶಶಿಕಲಾ ಎಂಬುವರು ₹1.27 ಲಕ್ಷ ಕಳೆದುಕೊಂಡಿದ್ದಾರೆ. ಟೆಲಿಗ್ರಾಮ್‌ ಮುಖಾಂತರ ಮೆಸೇಜ್‌ ಮಾಡಿದ ಸೈಬರ್‌ ಆರೋಪಿಗಳು ಒಂದು ಲಿಂಕ್‌ ಕಳುಹಿಸಿದ್ದಾರೆ. ಶಶಿಕಲಾ ಲಿಂಕ್‌ ಕ್ಲಿಕ್‌ ಮಾಡಿ ನೋಂದಣಿಯಾಗಿದ್ದಾರೆ. ಸ್ಕ್ರೀನ್‌ಶಾರ್ಟ್‌ ತೆಗೆದು ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಅವರ ಖಾತೆಗೆ ₹120 ಹಾಕಿದ್ದಾರೆ. ಟಾಸ್ಕ್‌ ನೀಡಲು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ ಒಟ್ಟು ₹1.27 ಲಕ್ಷ ಹಣವನ್ನು ಸೈಬರ್‌ ವಂಚಕರು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆ ಯುಪಿಐ ಐ.ಡಿಗಳಿಗೆ ವರ್ಗಾಯಿಸಿದ್ದಾರೆ. ಅವರಿಗೆ ಯಾವುದೇ ಹಣ ವಾಪಸ್‌ ಬಂದಿಲ್ಲ. ಲಾಭದ ಆಸೆ ತೋರಿಸಿ ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.