ತುಮಕೂರು: ಬದಲಾದ ನಿಯಮಾವಳಿಗಳಿಂದಾಗಿ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೇವಲ 7 ಖಾಸಗಿ ಶಾಲೆಗಳಲ್ಲಿ 64 ಆರ್‌ಟಿಇ (ಕಡ್ಡಾಯ ಶಿಕ್ಷಣ ಹಕ್ಕು) ಸೀಟುಗಳು ಮಾತ್ರ ಲಭ್ಯವಾಗಲಿವೆ.
ಸರ್ಕಾರದ ಹೊಸ ಮಾರ್ಗಸೂಚಿಯಿಂದಾಗಿ ಎರಡು ವರ್ಷಗಳಿಂದ ಆರ್‌ಟಿಇ ವ್ಯಾಪ್ತಿಗೆ ಒಳಪಡುವ ಶಾಲೆಗಳು ಮತ್ತು ಸೀಟುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 2018–19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 200 ಶಾಲೆಗಳಲ್ಲಿ 1,000ಕ್ಕೂ ಹೆಚ್ಚು ಆರ್‌ಟಿಇ ಸೀಟುಗಳು ಲಭ್ಯವಾಗಿದ್ದವು.
2019–20ನೇ ಸಾಲಿನ ಶೈಕ್ಷಣಿಕ ವರ್ಷಾರಂಭದಲ್ಲಿಆರ್‌ಟಿಇ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದರಿಂದ ಆರ್‌ಟಿಇ ಶಾಲೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿತ್ತು. ಹೊಸ ನಿಯಮದ ಪ್ರಕಾರ, ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದರೆ ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಹಾಗಾಗಿ ಶಾಲೆ ಹಾಗೂ ಸೀಟುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.
ಆರ್‌ಟಿಇ ಹೊಸ ನಿಯಮಾವಳಿ ನಂತರ 2019–20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 71 ಆರ್‌ಟಿಇ ಸೀಟುಗಳು ಲಭ್ಯ ಇದ್ದವು. ಆದರೆ 45 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದರು.
ಕೋವಿಡ್–19 ಕಾರಣದಿಂದಾಗಿ ಶಾಲೆಗಳ ಪುನರಾರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಳ್ಳದೇ ಇದ್ದರೂ ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಖಾಸಗಿ, ಅನುದಾನಿತ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಬಡ ಕುಟುಂಬಗಳ ಮಕ್ಕಳಿಗೆ ಮೀಸಲಿಡಬೇಕು ಎಂಬುದು ಆರ್‌ಟಿಇ ಕಾಯ್ದೆಯ ನಿಯಮ. ಅದರಂತೆ ಜಿಲ್ಲೆಯಲ್ಲಿ 7 ಶಾಲೆಗಳನ್ನು ಗುರುತಿಸಲಾಗಿದೆ. ನಿಯಮಗಳ ಅನುಸಾರ ಜಿಲ್ಲೆಗೆ ಈ ವರ್ಷ 64 ಸೀಟುಗಳು ಹಂಚಿಕೆಯಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಸದ್ಯ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಲಭ್ಯವಿರುವ ಸೀಟುಗಳ ಸಂಖ್ಯೆಯಲ್ಲಿ ಪರಿಷ್ಕರಣೆ ನಡೆದಿದೆ. ಮೊದಲ ಸುತ್ತಿನಲ್ಲಿ 36 ಮಕ್ಕಳ ಹೆಸರುಗಳ ಪಟ್ಟಿ ಬಿಡುಗಡೆಯಾಗಿದೆ. ಶೀಘ್ರ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಬಹುತೇಕ ಜನವಸತಿ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇವೆ. ಕೇವಲ 7 ಜನವಸತಿ ಪ್ರದೇಶಗಳಲ್ಲಿ ಮಾತ್ರ ಈ ರೀತಿಯ ಶಾಲೆಗಳು ಇಲ್ಲದಿರುವುದದರಿಂದ ಆರ್‌ಟಿಇಗೆ ಅವಕಾಶ ನೀಡಲಾಗಿದೆ. ಅದರಲ್ಲಿ ತುಮಕೂರು ನಗರದ 34ನೇ ವಾರ್ಡ್‌ನಲ್ಲಿ 3 ಶಾಲೆ, ಆಲ್ದೂರು ಹೊಸಹಳ್ಳಿಯಲ್ಲಿ ಒಂದು, ತುಮಕೂರು ಗ್ರಾಮಾಂತರದ ಕೊಂಡನಾಯ್ಕನಹಳ್ಳಿಯಲ್ಲಿ ಒಂದು, ತುರುವೇಕೆರೆ ತಾಲ್ಲೂಕಿನ ಪೋಡಿ ನಾಗಸಂದ್ರದ ಎರಡು ಶಾಲೆಗಳಲ್ಲಿ ಆರ್‌ಟಿಇ ಸೀಟುಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.