ತುಮಕೂರು: ಲೋಕಸಭಾ ಕ್ಷೇತ್ರದ ಎಸ್‌ಯುಸಿಐ (ಕಮ್ಯುನಿಸ್ಟ್) ಅಭ್ಯರ್ಥಿ ಎಸ್.ಎನ್.ಸ್ವಾಮಿ ಕ್ಷೇತ್ರದ ಎಲ್ಲೆಡೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ನಾಮಪತ್ರ ಸಲ್ಲಿಸಿದ ದಿನದಿಂದ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಸಮಸ್ಯೆ, ಅಭಿವೃದ್ಧಿಯ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ‘ಹೋರಾಟದ ಭಾಗವಾಗಿ ಚುನಾವಣೆ ಎದುರಿಸುತ್ತಿದ್ದೇವೆ’ ಎಂದು ಹೇಳುವ ಮೂಲಕ ಚುನಾವಣೆಯ ಕಣಕ್ಕೆ ಇಳಿದಿದ್ದರು. ಇದೀಗ ತಮ್ಮದೇ ಹಾದಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ.
ನಗರದಲ್ಲಿ ಸೋಮವಾರ ಎಐಡಿಎಸ್‌ಒ ಪದಾಧಿಕಾರಿಗಳು ಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ವಿದ್ಯಾರ್ಥಿ ಪ್ರಣಾಳಿಕೆ ವಿತರಿಸಿದರು. ಹಲವು ವಿಷಯಗಳ ಕುರಿತು ಚರ್ಚಿಸಿದರು.
‘ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್‌ಇಪಿ ಹಿಂಪಡೆಯಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು. ನಾಲ್ಕು ವರ್ಷದ ಪದವಿ ವಾಪಸ್ ಪಡೆಯಬೇಕು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು’ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಒತ್ತಾಯಿಸಿದರು.
ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿವೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ, ಧರ್ಮದ ವಿಷಯಗಳನ್ನು ಮುನ್ನೆಲೆಗೆ ತರುತ್ತಿವೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಧ್ವನಿ ಎತ್ತುವ ನಾಯಕರು ಬೇಕಾಗಿದ್ದಾರೆ. ಪ್ರಜ್ಞಾವಂತಿಕೆಯಿಂದ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದರು.
ಪ್ರಣಾಳಿಕೆ ಸ್ವೀಕರಿಸಿದ ಸ್ವಾಮಿ ಮಾತನಾಡಿ ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸುವ ಭರವಸೆ ನೀಡಿದರು. ಎಐಡಿಎಸ್‍ಒ ಪದಾಧಿಕಾರಿಗಳಾದ ಅಕ್ಷರ್, ಭರತ್, ಪಲ್ಲವಿ, ಮಿಥುನ್, ವೃಷಭ, ಹೇಮು, ಗೋಕುಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.