ADVERTISEMENT

ಬಂದ್‌ಗೆ ಶಾಸಕ ಎಸ್.ಆರ್ ಶ್ರೀನಿವಾಸ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 5:05 IST
Last Updated 25 ಜೂನ್ 2024, 5:05 IST
ಗುಬ್ಬಿ ಪಟ್ಟಣದಲ್ಲಿ ರೈತರಿಗೆ ಕೃಷಿ ಮೋಟರ್‌, ಪೈಪ್‌ ವಿತರಿಸಲಾಯಿತು
ಗುಬ್ಬಿ ಪಟ್ಟಣದಲ್ಲಿ ರೈತರಿಗೆ ಕೃಷಿ ಮೋಟರ್‌, ಪೈಪ್‌ ವಿತರಿಸಲಾಯಿತು   

ಗುಬ್ಬಿ: ‘ಹೇಮಾವತಿ ಎಕ್ಸ್‌ಪ್ರೆಸ್‌ಲಿಂಕ್ ಕೆನಾಲ್ ವಿರೋಧಿಸಿ ಜೂನ್ 25ರಂದು ನಡೆಯುವ ಗುಬ್ಬಿ ಬಂದ್‌ನ್ನು ಬೆಂಬಲಿಸುತ್ತೇನೆ’ ಎಂದು ಶಾಸಕ ಎಸ್.ಆ.ಶ್ರೀನಿವಾಸ್ ತಿಳಿಸಿದರು.

ಸೋಮವಾರ ಪಟ್ಟಣದಲ್ಲಿ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಫಲಾನುಭವಿ ರೈತರಿಗೆ ಪಂಪ್‌, ಮೋಟಾರ್ ವಿತರಿಸಿ ಮಾತನಾಡಿದರು.

‘ಮಾಗಡಿ, ರಾಮನಗರ ಭಾಗಗಳಿಗೆ ಹೇಮಾವತಿ ನೀರು ನೀಡುವುದರಿಂದ ಜಿಲ್ಲೆಯ ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರೆದಿದ್ದ ಸಭೆಯಲ್ಲಿಯೂ ವಿರೋಧ ವ್ಯಕ್ತಪಡಿಸಿದ್ದೇನೆ’ ಎಂದರು.

ADVERTISEMENT

‘ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ತಾಂತ್ರಿಕ ಸಮಿತಿಯನ್ನು ನೇಮಿಸಲಾಗಿದೆ. 10 ವರ್ಷಗಳಲ್ಲಿ ನಾಲೆಯಲ್ಲಿ ಹರಿದಿರುವ ನೀರಿನ ದತ್ತಾಂಶವನ್ನು ತೆಗೆದುಕೊಂಡು ಕುಣಿಗಲ್ ಭಾಗಕ್ಕೆ ನೀರು ಹರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದುವರೆಗೂ ಜಿಲ್ಲೆಯ ಪಾಲಿನ ನೀರನ್ನೇ ಪಡೆಯಲು ಸಾಧ್ಯವಾಗದಿರುವಾಗ ರಾಮನಗರಕ್ಕೆ ನೀರು ಹರಿಸುವುದರಿಂದ ತಾಲ್ಲೂಕಿಗೆ ಹೆಚ್ಚು ಅನ್ಯಾಯವಾಗುವುದರಿಂದ ಕೆನಾಲ್ ನಿರ್ಮಾಣ ಮಾಡಬಾರದು ಎಂದು ಒತ್ತಾಯ ಮಾಡಿದ್ದೇನೆ’ ಎಂದು ತಿಳಿಸಿದರು.

ಸಂಸದ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಜಿಲ್ಲೆಯ ಶಾಸಕರ ಜತೆಯಲ್ಲಿ ಚರ್ಚಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಮೋಹನ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಯರಾಮಯ್ಯ, ಫಲಾನುಭವಿ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.