ADVERTISEMENT

ಸ್ವಾಯತ್ತೆ ಕಳೆದುಕೊಂಡ ಸಾಹಿತ್ಯ ಪರಿಷತ್ತು: ಸಾಹಿತಿ ಸಿದ್ಧರಾಮಯ್ಯ

ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಎಸ್.ಜಿ.ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 7:47 IST
Last Updated 30 ಡಿಸೆಂಬರ್ 2023, 7:47 IST

ತುಮಕೂರು: ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಮೇಲಾಟದಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತತೆ ಕಳೆದುಕೊಂಡಿದೆ. ಇದರಿಂದ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಅಪಾಯ ಎದುರಾಗಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಆತಂಕ ವ್ಯಕ್ತಪಡಿಸಿದರು.

ನಗರದ ಗಾಜಿನಮನೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಮೈಸೂರು ರಾಜಮನೆತನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಸ್ವಾಯತ್ತತೆ ಕೊಟ್ಟಿದ್ದರು. ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದರು. ಈಗ ಪರಿಷತ್ತು ಸೇರಿದಂತೆ ಸ್ವಾಯತ್ತ ಸಂಸ್ಥೆಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪದಿಂದಾಗಿ ಸ್ವಾಯತ್ತತೆ ಕಳೆದುಕೊಂಡಿವೆ. ಇಂತಹ ಸಂಸ್ಥೆಗಳು ಪಕ್ಷ ರಾಜಕಾರಣದ ವೇದಿಕೆಗಳಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳುವ ಸಂಸ್ಥೆಗಳಲ್ಲ ಎಂಬುದನ್ನು ಮನಗಾಣಬೇಕು ಎಂದು ಎಚ್ಚರಿಸಿದರು.

ADVERTISEMENT

ಸ್ವಾಯತ್ತ ಸಂಸ್ಥೆಗಳ ಸ್ಥಿತಿಗಳನ್ನು ಬಿಚ್ಚಿಟ್ಟ ನಂತರ ಓಲೈಕೆ ಸಾಹಿತಿಗಳನ್ನು ಮೃದು ಮಾತುಗಳಲ್ಲೇ ತರಾಟೆಗೆ ತೆಗೆದುಕೊಂಡರು. ಪಾಕಿಸ್ತಾನದ ಅಂದಿನ ಪ್ರಧಾನಿ ಜಿಯಾವುಲ್ ಹಕ್ ನಡೆಗೆ ಅಲ್ಲಿನ ಸಾಹಿತ್ಯ ವಲಯ ನೀಡಿದ ಪ್ರತಿಕ್ರಿಯೆ ಉಲ್ಲೇಖಿಸಿದರು. ‘ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ನಮ್ಮ ಸಾಹಿತಿಗಳು ಪ್ರತಿಕ್ರಿಯಿಸದೆ ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆತಿದ್ದಾರೆ. ಜಾನ ಮೌನ ವಹಿಸಿದ್ದಾರೆ. ಪ್ರತಿಯೊಬ್ಬ ಸಾಹಿತಿಯೂ ಆತ್ಮಾವಲೋಕನ ಮಾಡಿಕೊಂಡು ಉತ್ತರ ಕೊಡುವ ಕಾಲ ಸನ್ನಿಹಿತವಾಗಿದೆ’ ಎಂದು ಎಚ್ಚರಿಸಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಿಕ್ಕಟ್ಟು ಎದುರಿಸುತ್ತಿದೆ. ಸಾಹಿತಿಗಳು ಆತ್ಮಾವಲೋಕನದ ಮಾತುಗಳನ್ನು ಆಡದಿದ್ದರೇ ಸಮಾಜ ದ್ರೋಹಿಗಳಾಗುತ್ತಾರೆ. ವಾಸ್ತವ ಮರೆತು ಕಣ್ಣು ಮುಚ್ಚಿ ಬರೆದರೆ ಅದು ಆತ್ಮ ದ್ರೋಹದ ಕೃತ್ಯವಾಗುತ್ತದೆ. ಕ್ರಾಂತಿ ಮಾಡಬೇಕಾದ ಸಂದರ್ಭಗಳಲ್ಲಿ, ಸಾಮಾಜಿಕ ಕ್ಷೋಭೆ ಉಂಟಾದಾಗ ಮೌನ ವಹಿಸಿದ್ದೀರಲ್ಲ ಏಕೆ? ಎಂದು ಪ್ರಶ್ನಿಸಿದರು. ಮೌನ ವಹಿಸಿ ಬರೆದರೆ ಅದನ್ನು ಬೂಸ ಸಾಹಿತ್ಯ ಎನ್ನಬೇಕಾಗುತ್ತದೆ. ನೈತಿಕ ಅಧಿಕಾರದ ಸ್ಥಾನದಲ್ಲಿ ಕುಳಿತ ನಾವುಗಳೇ ಮಾತನಾಡದಿದ್ದರೆ ಸಮಾಜ ಸರಿಪಡಿಸುವವರು ಯಾರು ಎಂದು ಕೇಳಿದರು.

ರಾಜರ ಆಸ್ಥಾನಗಳಲ್ಲಿ ಇದ್ದವರು ಒಂದು ಧರ್ಮ, ತತ್ವಕ್ಕೆ ಅನುಗುಣವಾಗಿ ಸಾಹಿತ್ಯ ರಚಿಸಿದರು. ರಾಜಾಶ್ರಯದಲ್ಲಿ ಇದ್ದರೂ ಇಕ್ಕಟ್ಟು– ಬಿಕ್ಕಟ್ಟು ಎದುರಾದಾಗ ವ್ಯಕ್ತಿ ಸ್ವಾತಂತ್ರ್ಯ ಸಾರಿದರು. ಅಂತಹ ಕೆಲಸವನ್ನು ಈಗಿನ ಸಾಹಿತ್ಯ ವಲಯ ಮಾಡಬೇಕಿದೆ ಎಂದು ಸಿದ್ಧರಾಮಯ್ಯ ಹೇಳಿದರು.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಸಾಹಿತ್ಯ ವಲಯದಲ್ಲಿ ಎಡಪಂಥೀಯ, ಬಲಪಂಥೀಯ ಎಂಬ ಎರಡು ಮುಖ ಇದೆ. ಅದೇ ರೀತಿ ಕನ್ನಡ ಭಾಷೆಗೆ ಹಿತ್ತಲಗಿಡ ಮದ್ದಲ್ಲ, ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ರೋಗ ಅಂಟಿಕೊಂಡಿದೆ. ಈ ಎರಡನ್ನೂ ಬಿಟ್ಟು ಹೊರ ಬಂದಾಗ ಭಾಷೆಗೆ ನ್ಯಾಯ ಸಲ್ಲಿಸಬಹುದು. ಧರ್ಮದಲ್ಲಿ ರಾಜಕೀಯ ಸೇರಿದರೂ ಸಾಹಿತ್ಯದಲ್ಲಿ ರಾಜಕೀಯ ಸೇರಬಾರದು’ ಎಂದು ಸಲಹೆ ಮಾಡಿದರು.

ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜಿ, ‘ವಿಜ್ಞಾನ ಬದುಕಲು ಸಹಾಯ ಮಾಡುತ್ತದೆ. ಜ್ಞಾನಕ್ಕೆ ಸಹಾಯ ಮಾಡುವುದಿಲ್ಲ. ಸಾಹಿತ್ಯದ ಮೂಲಕವೇ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.