ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು, ಏನು ಬೇಕಾದರೂ ಆಗಬಹುದು. ಆದರೆ, ಅಂಬೇಡ್ಕರ್ ಅನುಯಾಯಿಗಳು ಹಿಂದುತ್ವದ ಆಚರಣೆಯಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸದ ಸಂಗತಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಷಾದಿಸಿದರು.
ನಗರದಲ್ಲಿ ಭಾನುವಾರ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಸಮನ್ವಯ ಸಮಿತಿ, ಕಲ್ಯಾಣ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಫುಲೆ ಜನ್ಮ ದಿನ ಆಚರಣೆ, ಸಾಧಕ ಶಿಕ್ಷಕಿಯರಿಗೆ ಸನ್ಮಾನ, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಸೇವಾ ಕೇಂದ್ರದಿಂದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೋಷಿತ ಸಮುದಾಯಗಳು ಮಕ್ಕಳಿಗೆ ತಮ್ಮ ಇತಿಹಾಸ ಪರಿಚಯಿಸದಿದ್ದರೆ ಮುಚ್ಚಿಟ್ಟಿರುವ ಸಂಗತಿಗಳು ಮರೆಯಾಗುತ್ತವೆ. ಕಲ್ಪಿತ ಇತಿಹಾಸಗಳೇ ಸತ್ಯವಾಗುತ್ತವೆ. ಅಂತಹ ಕಲ್ಪಿತ ಇತಿಹಾಸದಲ್ಲಿಯೇ ಇಂದಿನ ಯುವ ಸಮೂಹ ಮುಳುಗಿದೆ ಎಂದರು.
ಸಾವಿತ್ರಿಬಾಯಿ ಫುಲೆ ಸೇರಿದಂತೆ ಮಹನೀಯರ ವಿಚಾರಧಾರೆಗಳನ್ನು ತಳಮಟ್ಟದಿಂದಲೇ ಯುವಜನರಿಗೆ ತಲುಪಿಸಬೇಕು. ಅಧಿಕಾರ, ಜಾತಿ, ಐಶ್ವರ್ಯ ಒಂದೇ ಕಡೆ ಕ್ರೋಡೀಕೃತವಾದರೆ ಅಪಾಯ, ಅಸಮಾನತೆ ಹೆಚ್ಚಲಿದೆ. ಶೋಷಿತ ಸಮುದಾಯಗಳು ಬೀದಿಗೆ ಬರಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್, ‘ತಳ ಸಮುದಾಯಗಳು ಒಳ ಜಾತಿಗಳಿಂದ ಹೊರಬರಬೇಕು. ಸಂವಿಧಾನದ ಅಡಿಯಲ್ಲಿ ಒಂದಾಗಬೇಕು. ನೌಕರರು ವ್ಯವಸ್ಥೆಯ ಸುಧಾರಣೆಗೆ ಶ್ರಮಿಸಬೇಕು’ ಎಂದು ಸಲಹೆ ಮಾಡಿದರು.
ಉಪನ್ಯಾಸಕಿ ಅಶ್ವಿನಿ ಬಿ.ಜಾನೆ ಉಪನ್ಯಾಸ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ನೌಕರರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಪದಾಧಿಕಾರಿಗಳಾದ ಕೆಂಪಸಿದ್ದಯ್ಯ, ಮೋಹನ್‍ಕುಮಾರ್, ವೈ.ಟಿ.ತಿಮ್ಮಯ್ಯ, ನರಸಿಂಹಮೂರ್ತಿ, ಅಶ್ವತ್ಥನಾರಾಯಣ್, ಹನುಮಂತರಾಯಪ್ಪ, ಸುರೇಶ್, ಹನುಮಂತರಾಜು, ಮಂಜಣ್ಣ, ಪ್ರೊ.ಗಂಗಾಧರ್, ಕೋಟೆ ಕಲ್ಲಯ್ಯ, ಯುವರಾಜು, ಚಿಕ್ಕಣ್ಣ, ಶಿವರಾಮು, ಎಚ್.ಟಿ.ರವಿಕುಮಾರ್, ನಂಜರಾಜಮೂರ್ತಿ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕಿ ಅಸ್ಮಾ ಉಲ್ಲಾಖಾನ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.