ADVERTISEMENT

ಮಧುಗಿರಿ | ಮಳೆ ಬಂದಾಗ ಚಾವಣಿ ದಿಟ್ಟಿಸುವ ಮಕ್ಕಳು

ಮಧುಗಿರಿ: 334 ಶಾಲೆ ಕೊಠಡಿಗಳು ಸಂಪೂರ್ಣ ಶಿಥಿಲ: 178 ಶಿಕ್ಷಕರ ಕೊರತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 7:08 IST
Last Updated 22 ಜೂನ್ 2024, 7:08 IST
ಮಧುಗಿರಿ ತಾಲ್ಲೂಕು ಕೂಲನಹಳ್ಳಿ ಸರ್ಕಾರಿ ಶಾಲೆ ಸ್ಥಿತಿ
ಮಧುಗಿರಿ ತಾಲ್ಲೂಕು ಕೂಲನಹಳ್ಳಿ ಸರ್ಕಾರಿ ಶಾಲೆ ಸ್ಥಿತಿ   

ಮಧುಗಿರಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪೋಷಕರು ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 369 ಸರ್ಕಾರಿ ಶಾಲೆಗಳಿವೆ. 334 ಶಾಲೆ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡು ಬಳಕಗೆ ಬಾರದ ಸ್ಥಿತಿಯಲ್ಲಿವೆ. ಮಳೆ ಮತ್ತು ಗಾಳಿ ಬಂದರೆ ವಿದ್ಯಾರ್ಥಿಗಳು ಕೊಠಡಿಯ ಚಾವಣಿಯಲ್ಲಿ ಭಯದಿಂದ ದಿಟ್ಟಿಸುವ ಸ್ಥಿತಿ ಇದೆ. ಶಿಥಿಲಗೊಂಡಿರುವ ಗೋಡೆಗಳು ಮತ್ತು ಚಾವಣಿಯ ಹೆಂಚುಗಳು ಗಾಳಿಗೆ ಅಲುಗಾಡುತ್ತಿವೆ. ಯಾವಾಗ ನೆತ್ತಿಯ ಮೇಲೆ ಬೀಳುತ್ತವೊ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಿತಿ ಎದುರಾಗಿದೆ.

ಸಂಪೂರ್ಣವಾಗಿ ಹಾಳಾಗಿರುವ ಕೊಠಡಿಗಳಿಗೆ ಶಿಕ್ಷಕರು ಬೀಗ ಹಾಕಿದ್ದಾರೆ. ಆದರೆ ಕೊಠಡಿ ಒಳಗೆ ಕ್ರಿಮಿ– ಕೀಟ ಮತ್ತು ಹಾವುಗಳ ವಾಸ ಕೇಂದ್ರಗಳಾಗಿ ಮಾರ್ಪಟ್ಟಿವೆ. 97 ಅನುಪಯುಕ್ತ ಕೊಠಡಿಗಳನ್ನು ತೆರವುಗೊಳಿಸುವ ಉದ್ದೇಶಕ್ಕಾಗಿ ಜಿಲ್ಲಾ ಪಂಚಾಯಿತಿ ಕಚೇರಿ ಅನುಮತಿ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಪತ್ರ ಬರೆದಿದ್ದಾರೆ. ಈಗಾಗಲೇ ಅನುಪಯುಕ್ತ 131 ಕೊಠಡಿಗಳನ್ನು ತೆರವುಗೊಳಿಸಲಾಗಿದೆ.

ADVERTISEMENT

ತಾಲ್ಲೂಕಿನ ಕೆಲವು ಕೊಠಡಿಯ ಚಾವಣಿಯ ಕಬ್ಬಿಣ ಹೊರಬಂದು ದಿನ ಕಳೆದಂತೆ ವಿದ್ಯಾರ್ಥಿಗಳ ತಲೆಯ ಮೇಲೆ ಗೋಡೆಯ ಚೆಕ್ಕೆ ಮತ್ತು ಮಣ್ಣು ಉದುರುತ್ತಿವೆ. ಕೆಲವರು ಗಾಯಗೊಂಡ ನಿದರ್ಶನಗಳೂ ಇವೆ. ಕೆಲವು ಶಾಲೆಗಳ ಕೊಠಡಿಗಳು ಸುಣ್ಣ- ಬಣ್ಣ ಕಂಡು ಅದೆಷ್ಟೊ ವರ್ಷಗಳು ಕಳೆದಿವೆ.  ವಿದ್ಯಾರ್ಥಿಗಳು ‘ನಮ್ಮ ಶಾಲೆಗೆ ಯಾವಾಗ ಬಣ್ಣ ಬಳಿಸಿತ್ತಾರೊ’ ಎನ್ನುತ್ತಲೇ ಮುಂದಿನ ಶಾಲೆಗಳಿಗೆ ತೆರಳುವಂತಾಗಿದೆ.

ತಾಲ್ಲೂಕಿನಲ್ಲಿ 59 ಸರ್ಕಾರಿ ಶಾಲೆಗಳ ಶೌಚಾಲಯ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. 31 ಶೌಚಾಲಯಗಳನ್ನು ನಿರ್ಮಾಣ ಮಾಡಲು ಶಿಕ್ಷಣ ಇಲಾಖೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿ ಸಿಇಒಗೆ ಕಳುಹಿಸಲಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಶಾಲೆಗಳಿಗೆ ಮೂಲ ಸೌಕರ್ಯ ಕೊರತೆಯಾಗಿ ಕೊಠಡಿಗಳು ಮಳೆಗೆ ಸೋರಿ ಬೀಳುವ ಹಂತ ತಲುಪಿವೆ. ಮಕ್ಕಳನ್ನು ಈ ಸರ್ಕಾರಿ ಶಾಲೆಗಳಿಗೆ ಹೇಗೆ ಕಳುಹಿಸುವುದು ಎಂದು ಪೋಷಕರು ಅಧಿಕಾರಿಗಳನ್ನು ಮತ್ತು ಶಿಕ್ಷಕರನ್ನು ಪ್ರಶ್ನಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ 130 ಶಿಕ್ಷಕರು ಮತ್ತು ಪ್ರೌಢಶಾಲೆಯಲ್ಲಿ 48 ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಆದರೆ ಪೋಷಕರು ‘ಕಾಯಂ ಶಿಕ್ಷಕರು ಇದ್ದರೆ, ಅವರ ಅನುಭವದ ಪಾಠ ಪ್ರವಚನದಿಂದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಾರೆ. ಸರ್ಕಾರ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು’ ಎಂದು ಆಗ್ರಹಿಸಿದ್ದಾರೆ.

ರಂಗಾಪುರ ಸರ್ಕಾರಿ ಶಾಲೆ
ಲೋಕೇಶ್
ಶಾಂತರಾಧ್ಯ
ಹನುಮಂತರಾಯಪ್ಪ

ದುರಸ್ತಿ ಜರೂರು ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಷಣ ಮಾಡುತ್ತಾರೆ. ಆದರೆ ಅದು ಕಾರ್ಯಗತವಾಗಬೇಕು. ಶಿಥಿಲಗೊಂಡಿರುವ ಕೊಠಡಿಗಳನ್ನು ಜರೂರಾಗಿ ಸರಿಪಡಿಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮೂಲ ಸೌಕರ್ಯ ನೀಡಬೇಕು. ಲೋಕೇಶ್ ಕೊಡಿಗೇನಹಳ್ಳಿ ಮೂಲ ಸೌಕರ್ಯ ಅನಿವಾರ್ಯ ಕೆಲವು ಶಾಲೆಗಳಲ್ಲಿ ಮೂಲ ಸೌಕರ್ಯ ಮತ್ತು ಶಿಕ್ಷಕರ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಸರ್ಕಾರಿ ಶಾಲೆಗಳ ಸ್ಥಿತಿ– ಗತಿ ಸರಿಹೋದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯುತ್ತವೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ. ಶಾಂತರಾಧ್ಯ ಮಧುಗಿರಿ 334 ಕೊಠಡಿಗೆ ಕ್ರಿಯಾ ಯೋಜನೆ 334 ಶಿಥಿಲಗೊಂಡಿರುವ ಕೊಠಡಿಗಳನ್ನು ಹಾಗೂ 31 ಶೌಚಾಲಯಗಳನ್ನು ನಿರ್ಮಿಸಲು ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಎಂಎನ್‌ಆರ್‌ಇಜಿ ಎಸ್‌ಪಿಆರ್‌ಎಫ್ ಮತ್ತು ಜಿ.ಪಂ ಇಲಾಖೆಯಿಂದ ಈ ಕೊಠಡಿಗಳನ್ನು ನಿರ್ಮಿಸಲಾಗುವುದು. ಶಿಕ್ಷಕರ ಕೊರತೆ ಇರುವೆಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಪಾಠ ಮಾಡಲಾಗುತ್ತಿದೆ. ಹನುಮಂತರಾಯಪ್ಪ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.