ADVERTISEMENT

ದೇಣಿಗೆ ಪಡೆದು ಶಾಲೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 13:39 IST
Last Updated 24 ಜೂನ್ 2018, 13:39 IST
24ಕೆಡಿಜಿ1 ಚೈತನ್ಯ ಸಿಂಚನ ಸಂಸ್ಥೆಯ ಮೆನೇಜರ್ ಸಿ.ವಿ. ಕುಮಾರ್ ಮತ್ತು ಅವರ ತಂಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳನ್ನು ನೀಡಿರುವ ಚಿತ್ರ.
24ಕೆಡಿಜಿ1 ಚೈತನ್ಯ ಸಿಂಚನ ಸಂಸ್ಥೆಯ ಮೆನೇಜರ್ ಸಿ.ವಿ. ಕುಮಾರ್ ಮತ್ತು ಅವರ ತಂಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳನ್ನು ನೀಡಿರುವ ಚಿತ್ರ.   

ಕೊಡಿಗೇನಹಳ್ಳಿ: ಮನುಷ್ಯ ಜನ್ಮ ಎಂದು ಶಾಶ್ವತವಲ್ಲ. ಆದರೆ ತನ್ನ ಜೀವಿತಾವಧಿಯೊಳಗೆ ಇತರರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂಬ ಉದ್ದೇಶ ಸಿ.ವಿ.ಕುಮಾರ್ ಅವರದ್ದು. ಆದ್ದರಿಂದಲೇ ತನ್ನ ಎಲ್.ಐ.ಸಿ. ಸಂಸ್ಥೆಯ ಉದ್ಯೋಗಿ ಸ್ನೇಹಿತರು ಹಾಗೂ ಇತರರ ಹತ್ತಿರ ದೇಣಿಗೆ ಪಡೆದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ.

ಸಿ.ವಿ.ಕುಮಾರ್ ಅವರು ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಡವಿನಾಗೇನಹಳ್ಳಿ ಗ್ರಾಮದ ತಾಯಿ ಕಲ್ಯಾಣಮ್ಮ ಹಾಗೂ ತಂದೆ ಎನ್.ಶೇಷಾಚಾರ್ ಅವರ ಮಗನಾಗಿ ಹುಟ್ಟಿ ಪ್ರಾಥಮಿಕ ಶಾಲಾ ಹಂತ ಅದೇ ಗ್ರಾಮದಲ್ಲಿ ಮುಗಿಸಿ ನಂತರ ಬಿ.ಎಸ್‌ಸಿ, ಮೈಸೂರು (ವಿಮಾ ಅಭ್ಯಾಸದಲ್ಲಿ ಫೆಲೋಶಿಪ್) ಬೆಂಗಳೂರುನಲ್ಲಿ ಎಂ.ಎಸ್‌.ಸಿ.(ಆಪ್ತ ಸಲಹೆ ಮತ್ತು ಮಾನಸಿಕ ಸ್ವಾಸ್ಥದಲ್ಲಿ ಸ್ನಾತಕೋತ್ತರ ಪದವಿ) ಮುಗಿಸಿದರು. ಜೀವ ವಿಮಾ ನಿಗಮದಲ್ಲಿ ಸುಮಾರು 40 ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಿ ನಂತರ ನೌಕರರ ಸಹಕಾರ ಬ್ಯಾಂಕಿನ ನಿರ್ದೇಶಕರು, ಅಧ್ಯಕ್ಷರಾಗಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ಪ್ರಸ್ತುತ ಚೈತನ್ಯ ಸಿಂಚನ ಎಂಬ ಸಾಮಾಜಿಕ, ಶೈಕ್ಷಣಿಕ ದಾನ ದತ್ತಿ ಸಂಸ್ಥೆಯ ಸಂಸ್ಥಾಪಕ ಹಾಗೂ ಟ್ರಸ್ಟ್‌ನ ಮೆನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಿಂದೆ ತಾನು ಓದುವಾಗ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ಪರಿಸ್ಥಿತಿಯನ್ನು ಕಣ್ನಾರೆ ಕಂಡು ಸ್ವತಹ ಅನುಭವಿಸಿದ್ದ ಸಿ.ವಿ.ಕುಮಾರ್ ಗ್ರಾಮೀಣ ಭಾಗದ ಜನರ ಜೀವನ ಮಟ್ಟದಲ್ಲಿನ ಅಸಮಾನತೆ, ವಿದ್ಯಾಭ್ಯಾಸ ಹಾಗೂ ಆರೋಗ್ಯದ ವಿಚಾರಗಳಲ್ಲಿನ ಕೊರತೆ ಬಗ್ಗೆ ಹೆಚ್ಚಿನ ಕಾಳಜಿ ಇತ್ತು. ಇದರ ಜತೆಗೆ ಹಳ್ಳಿಯ ಮಕ್ಕಳು ನಗರ ಪ್ರದೇಶದ ಮಕ್ಕಳಂತೆ ಬುದ್ಧಿವಂತರಾಗಿ ಸೌಲಭ್ಯಗಳನ್ನು ಪಡೆಯಬೇಕೆಂಬ ಉದ್ದೇಶದಿಂದ 2006ರಲ್ಲಿ ಅನೌಪಚಾರಿಕವಾಗಿ ಒಂದೆರಡು ಶಾಲೆಗಳಿಗೆ ನೆರವು ನೀಡಲು ಆರಂಭಿಸಿದರು. ನಂತರ ಈ ಕೆಲಸ ಇಷ್ಟಕ್ಕೆ ಸೀಮಿತವಾಗಬಾರದೆಂಬ ಉದ್ದೇಶದಿಂದ ಜೀವ ವಿಮಾ ನೌಕರರೆ ನಡೆಸುತ್ತಿದ್ದ ಕಂಟ್ರೋಲರ್ಸ್ ಸಹಕಾರ ಬ್ಯಾಂಕ್‌ ಮುಂದೆ ಬಂದು ಚೈತನ್ಯ ಸಿಂಚನ ಸಂಸ್ಥೆಗೆ 5000 ದೇಣಿಗೆ ನೀಡಿ ಪ್ರಾಯೋಜಿಸಿತು.

ADVERTISEMENT

ಮೊದಲಿಗೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಮತ್ತು ಐಡಿಹಳ್ಳಿ ಹೋಬಳಿಗಳ ತಿಪ್ಪಾಪುರ, ಅಡವಿನಾಗೇನಹಳ್ಳಿ ಸರ್ಕಾರಿ ಶಾಲೆಗಳಿಗೆ 30 ಡಸ್ಕ್, ಬಿಸಿಯೂಟಕ್ಕೆ ತಟ್ಟೆ, ಲೋಟ, ಕುಕ್ಕರ್, ಆಟದ ಸಾಮಗ್ರಿ, ಬ್ಯಾಂಡ್ ಸೆಟ್ ಮತ್ತು ಕಂಪೂಟರ್ ಗಳನ್ನು ನೀಡಿತ್ತು. ಇಂದು ಶೈಕ್ಷಣಿಕ ವರ್ಷಾರಂಭದಲ್ಲಿ ಮಕ್ಕಳಿಗೆ ಅಗತ್ಯವಿರುವ ನೋಟ್ ಪುಸ್ತಕ, ಪೆನ್, ಪನ್ಸಿಲ್, ಜಾಮಿಟ್ರಿ ಬಾಕ್ಸ್, ರಬ್ಬರ್, ಮೆಂಡರ್, ಡಸ್ಕ್, ಕಂಪ್ಯೂಟರ್, ಆಟದ ಸಾಮಗ್ರಿಗಳನ್ನು ಆಯಾ ಶಾಲೆಗಳಿಗೆ ಬೇಟಿ ನೀಡಿ ಪ್ರತಿ ಮಗುವುಗೂ ವಿತರಿಸುತ್ತಾರೆ. 2018 ನೇ ಸಾಲಿನಲ್ಲಿ 51 ಶಾಲೆಗಳ 3618 ಮಕ್ಕಳಿಗೆ ಸುಮಾರು 27,000 ನೋಟ್ ಬುಕ್ ಮತ್ತು ಅದಕ್ಕೆ ಬೇಕಾದ ಇತರ ಶಾಲಾ ಸಾಮಗ್ರಿಗಳನ್ನು ವಿತರಿಸಲಾಗಿದೆ.

ಇವರ ಕೆಲಸ ಇಷ್ಟಕ್ಕೆ ನಿಲ್ಲದೆ ಮಕ್ಕಳು ಕಲಿಯುವುದನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಪಾಠಗಳನ್ನು ಆದರಿಸಿದ ಸೈನ್ಸ್, ಕಲೆ ಮತ್ತು ಗಣಿತ ವಿಷಯಕ್ಕೆ ಸಂಬಂಧಪಟ್ಟಂತೆ ರಸ ಪ್ರಶ್ನೆ ಕಾರ್ಯಕ್ರಮ ಆಯೋಜಿಸಿ ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಉತ್ತೇಜಿಸುತ್ತಾರೆ. ಜತೆಗೆ ಹೆಣ್ಣು ಮಕ್ಕಳಿಗಾಗಿ ನೈರ್ಮಲ್ಯ ಮತ್ತು ಸ್ವಯಂರಕ್ಷಣೆಯ ಬಗ್ಗೆ ವಿಶೇಷ ತರಬೇತಿ ಶಿಬಿರ ನಡೆಸುತ್ತಾರೆ. ಇಷ್ಟೆಲ್ಲ ಕೆಲಸಗಳಿಗೆ ದೇಣಿಗೆ ಮತ್ತು ಸಹಕಾರ ನೀಡುತ್ತಿರುವ ಸ್ನೇಹಿತರು ಹಾಗೂ ದಾನಿಗಳನ್ನು ಸ್ಮರಿಸುತ್ತಾ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮತ್ತು ಬಡ ಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವೆ ಹೊರತು ಇದರಲ್ಲಿ ಯಾವುದೇ ಸ್ವಾರ್ಥದ ಉದ್ದೇಶವಿಲ್ಲ ಎನ್ನುತ್ತಾರೆ ಸಿ.ವಿ. ಕುಮಾರ್. (ಮಾಹಿತಿಗೆ ಮೊಬೈಲ್ ನಂಬರ್ 9448063227).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.