ADVERTISEMENT

ದಾಖಲಾತಿ ಕಸಿದ ಸೌಕರ್ಯ ಕೊರತೆ

ಕೋವಿಡ್‌ ಸಂದರ್ಭದಲ್ಲಿ ಸುಧಾರಿಸದ್ದ ವಿದ್ಯಾರ್ಥಿಗಳ ಸಂಖ್ಯೆ: ಖಾಸಗಿ ಶಾಲೆಗಳತ್ತ ಒಲವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 4:23 IST
Last Updated 27 ಜೂನ್ 2024, 4:23 IST
ಗುಬ್ಬಿಯ ಶತಮಾನ ದಾಟಿರುವ ಸರ್ಕಾರಿ ಶಾಲೆ
ಗುಬ್ಬಿಯ ಶತಮಾನ ದಾಟಿರುವ ಸರ್ಕಾರಿ ಶಾಲೆ   

ಗುಬ್ಬಿ: ಬಿರುಕು ಬಿಟ್ಟಿರುವ ಗೋಡೆ, ಸಿಮೆಂಟ್‌ ಉದುರುತ್ತಿರುವ ಚಾವಣಿ, ಹಾಳಾಗಿರುವ ಹೆಂಚು, ಮಳೆ ಬಂದರೆ ನೀರು ಜಿನುಗುವ ಗೋಡೆಗಳು ಇದರ ಜೊತೆಗೆ ಮೂಲ ಸೌಕರ್ಯಗಳ ಕೊರತೆಯಿಂದ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳು ಸೊರಗಿವೆ. ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಸರ್ಕಾರಿ ಶಾಲೆಗಳಿಗೆ ಉಚಿತ ಸಮವಸ್ತ್ರ, ಶೂ, ಪುಸ್ತಕ ಇತ್ಯಾದಿ ಒದಗಿಸುತ್ತಿದ್ದರೂ ಶಿಕ್ಷಕರ ಕೊರತೆ ಹೆಚ್ಚಿದೆ. ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಶಾಲೆಗಳಿಗೆ ಪ್ರಬಲ ಪೈಪೋಟಿ ನೀಡಬೇಕಿದ್ದ ಸರ್ಕಾರಿ ಶಾಲೆಗಳಲ್ಲಿ ಅನೇಕ ವಿಷಯಗಳ ಬೋಧನೆಗೆ ಶಿಕ್ಷಕರೇ ಇಲ್ಲ. 

ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಆಟದ ಮೈದಾನ ಇಲ್ಲದೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ.

ADVERTISEMENT

ಕೋವಿಡ್ ಸಂದರ್ಭದಲ್ಲಿ ಮುಚ್ಚಿದ್ದ ಅನೇಕ ಶಾಲೆಗಳು ಪುನರಾರಂಭಗೊಂಡಿದ್ದವು. ಆದರೆ ದಿನ ಕಳೆದಂತೆ ಅವುಗ‌ಳು ಮುಚ್ಚಿ ಮಕ್ಕಳು ಖಾಸಗಿ ಶಾಲೆಯತ್ತ ಮುಖ ಮಾಡಿದ್ದಾರೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ನೇಮಕವಾಗಿ ಹಲವು ವರ್ಷಗಳೇ ಕಳೆದಿವೆ. ಮೇಲ್ದರ್ಜೆಗೆ ಏರಿಸಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಪದವೀಧರ ಶಿಕ್ಷಕರನ್ನು ನೇಮಿಸಿಕೊಂಡಿದ್ದರೂ ಹಲವೆಡೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಶಿಕ್ಷಕರು ಇಲ್ಲ.

ಬಹುತೇಕ ಶಿಕ್ಷಕರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಬರಲು ಹಿಂದೇಟು ಹಾಕುವ ಜೊತೆಗೆ ಬರುತ್ತಿರುವ ಶಿಕ್ಷಕರಲ್ಲಿ ಹಲವರು ಪರಿಣಾಮಕಾರಿ ಬೋಧನೆಗೆ ಗಮನಹರಿಸದೆ ಕಾರಣ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂಜರಿಯುತ್ತಿದ್ದೇವೆ ಎಂದು ಅನೇಕ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಕೊರತೆ ಇರುವ ಕೊಠಡಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿದ್ದ ವಿವೇಕ ಶಾಲಾ ಕೊಠಡಿ ಯೋಜನೆ ನನೆಗುದಿಗೆ ಬಿದ್ದಿದೆ. ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಲ್ಲೂಕಿನಲ್ಲಿ 398 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. 1,573 ಕೊಠಡಿಗಳಿದ್ದು, 1,096 ಸುಸ್ಥಿತಿಯಲ್ಲಿವೆ. 318 ಕೊಠಡಿಗಳಿಗೆ ಸಣ್ಣಪುಟ್ಟ ದುರಸ್ತಿಯ ಅಗತ್ಯವಿದೆ. 159 ಕೊಠಡಿಗಳನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಿಸಬೇಕಿದೆ. ತುರ್ತಾಗಿ 13 ಕೊಠಡಿಗಳನ್ನು ಈ ಶೈಕ್ಷಣಿಕ ವರ್ಷದಲ್ಲೇ ದುರಸ್ತಿ ಮಾಡಿದರೆ ವಿದ್ಯಾರ್ಥಿಗಳು ಪಾಠ ಕೇಳಲು ಅನುಕೂಲವಾಗಲಿದೆ.

ತಾಲ್ಲೂಕಿನ ಎನ್‌.ನಂದಿಹಳ್ಳಿ ವರಹಸಂದ್ರ, ಮಾರನಹಳ್ಳಿ, ದೊಡ್ಡಹೆಡಗನಹಳ್ಳಿ, ಮಾದನಹಳ್ಳಿ, ಎಳೆದಾಸನಹಳ್ಳಿ ಸೇರಿದಂತೆ ಹಲವೆಡೆ ಕೊಠಡಿಗಳು ಸಂಪೂರ್ಣ ಹಾಳಾಗಿರುವುದರಿಂದ ತುರ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

ತಾಲ್ಲೂಕಿನಲ್ಲಿ ಶತಮಾನ ದಾಟಿರುವ ಅನೇಕ ಸರ್ಕಾರಿ ಶಾಲೆಗಳಿವೆ. ಅವುಗಳನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರ ಎಂದು ನಿವೃತ್ತ ಶಿಕ್ಷಕ ಜಯಣ್ಣ ಬೇಸರ ವ್ಯಕ್ತಪಡಿಸಿದರು.

ಎನ್. ನಂದಿಹಳ್ಳಿ ಸರ್ಕಾರಿ ಶಾಲೆ
ಕುಮಾರಸ್ವಾಮಿ
ಗುರುಪ್ರಸಾದ್
ರಾಜಶೇಖರ್

Quote - ಸರ್ಕಾರಿ ಶಾಲೆಗಳ ಗುಣಮಟ್ಟ ಕಡಿಮೆಯಾಗದಂತೆ ನಿರ್ವಹಿಸಬೇಕಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಬದ್ಧತೆ ತೋರುತ್ತಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳೆಂದರೆ ಕೇವಲ ಬಡ ವರ್ಗದವರಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಕುಮಾರಸ್ವಾಮಿ ಪೋಷಕ

Quote - ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಭವಿಷ್ಯದಲ್ಲಿ ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಕಲ್ಪನೆ ಪೋಷಕರಲ್ಲಿ ಇದೆ. ಸಾಧ್ಯವಿರುವೆಡೆ ಆಂಗ್ಲ ಮಾಧ್ಯಮ ತೆರೆದರೆ ಸರ್ಕಾರಿ ಶಾಲೆಗಳು ಪುನಶ್ಚೇತನ ಸಾಧ್ಯ. ಗುರುಪ್ರಸಾದ್ ಎಸ್‌ಡಿಎಂಸಿ ಅಧ್ಯಕ್ಷ

Quote - ತಾಲ್ಲೂಕಿನ ಹಲವೆಡೆ ಸರ್ಕಾರಿ ಶಾಲೆ ಕೊಠಡಿಗಳು ದುರಸ್ತಿಯಾಗಬೇಕಿದೆ. ಶಿಕ್ಷಣ ಇಲಾಖೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ ಪಡೆದು ದುರಸ್ತಿಗೆ ಮುಂದಾದಲ್ಲಿ ಸಹಕಾರ ನೀಡುತ್ತೇವೆ. ರಾಜಶೇಖರ್ ಗ್ರಾಮ ಪಂಚಾಯಿತಿ ಸದಸ್ಯ

Quote - ಶಿಥಿಲಾವಸ್ಥೆ ತಲುಪಿರುವ ಕೊಠಡಿಗಳನ್ನು ಆದ್ಯತೆ ಮೇರೆಗೆ ದುರಸ್ತಿ ಮಾಡಲಾಗುತ್ತಿದೆ. ನರೇಗಾ ಯೋಜನೆ ಬಳಸಿಕೊಂಡು ಅನೇಕ ಕಡೆ ಶಾಲೆ ಕೊಠಡಿ ಹಾಗೂ ಕಾಂಪೌಂಡ್‌ ದುರಸ್ತಿ ಮಾಡಲಾಗಿದೆ. ತುರ್ತುಕ್ರಮ ಕೈಗೊಂಡು ಕೊಠಡಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಲೇಪಾಕ್ಷಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ

Cut-off box - ದುರಸ್ತಿಗೆ ಕಾದಿವೆ 143 ಕೊಠಡಿ ತಾಲ್ಲೂಕಿನಲ್ಲಿ 373 ಪ್ರಾಥಮಿಕ ಶಾಲೆಗಳ 1263 ಕೊಠಡಿಗಳು ಸುಸ್ಥಿತಿಯಲ್ಲಿವೆ. 143 ಕೊಠಡಿಗಳು ದುರಸ್ತಿಯಾಗಬೇಕಿದೆ. ಒಟ್ಟು 25 ಸರ್ಕಾರಿ ಪ್ರೌಢಶಾಲೆಗಳಲ್ಲಿ 150 ಕೊಠಡಿಗಳು ಸುಸ್ಥಿತಿಯಲ್ಲಿವೆ. 29 ಕೊಠಡಿಗಳು ದುರಸ್ತಿಯಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.