ತುಮಕೂರು: ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ಸಮೀಪ ಚೇಳು ಜೇಡ ಪತ್ತೆಯಾಗಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಒಂಟಿ ಜೇಡ, ಸೂರ್ಯ ಜೇಡ ಎಂಬ ಹೆಸರಿನಿಂದಲೂ ಇದನ್ನು ಕರೆಯುತ್ತಾರೆ.
ಜೀವವೈವಿಧ್ಯ ತಜ್ಞ ಮಂಜುನಾಥ ಎಸ್.ನಾಯಕ್ ಹಾಗೂ ಪಕ್ಷಿ ಪ್ರೇಮಿ ಸುನಿಲ್ ಕುಮಾರ್ ಮರಳಕುಂಟೆ ಅವರು ಈಚೆಗೆ ಪಕ್ಷಿ ವೀಕ್ಷಣೆ ಮಾಡುತ್ತಿದ್ದ ಸಮಯದಲ್ಲಿ ಗೋಚರಿಸಿದ್ದು, ಅದರ ಛಾಯಾಚಿತ್ರ ಸೆರೆಹಿಡಿದಿದ್ದಾರೆ. ಈ ಚೇಳು ಜೇಡಗಳು ಸಂಪೂರ್ಣ ನಿಶಾಚಾರಿ ಜೀವಿಯಾಗಿದ್ದು, ರಾತ್ರಿ ಸಮಯದಲ್ಲಿ ಚಟುವಟಿಕೆಯಿಂದ ಕೂಡಿರುತ್ತವೆ. ಹಗಲಿನಲ್ಲಿ ಗೋಚರಿಸುವುದು ವಿರಳ.
‘ಈಗ ದಾಖಲಿಸಿರುವ ಪ್ರಭೇದ 4.5 ಸೆ.ಮೀ ಉದ್ದವಿದ್ದು, ನೋಡುಗರಿಗೆ ಸ್ವಲ್ಪ ಭಯ ಹುಟ್ಟಿಸುವಂತೆ ಕಾಣುತ್ತದೆ. ಇದು ವಿಷಕಾರಿಯಲ್ಲ, ಮಾನವರಿಗೂ ಅಪಾಯಕಾರಿಯಲ್ಲ. ದೇಹ ರಚನೆ ಚೇಳಿನ ಮಾದರಿಯಲ್ಲಿದ್ದು, ಜೇಡಗಳಂತೆ 8 ಕಾಲಿನ ಜೋಡಣೆ ಹೊಂದಿದೆ. ಹಾಗಾಗಿ ಚೇಳು ಜೇಡ ಎಂದು ಕರೆಯಲಾಗುತ್ತದೆ’ ಎಂದು ಮಂಜುನಾಥ್ ಅಭಿಪ್ರಾಯಪಡುತ್ತಾರೆ.
ಕೃಷಿಗೆ ಪೀಡಕವಾದ ಕೀಟಗಳನ್ನು ಹೆಚ್ಚಾಗಿ ತಿಂದು ಬದುಕುತ್ತವೆ. ಹಾಗಾಗಿ ರೈತರಿಗೂ ಪರೋಪಕಾರಿ. ಇಲಿಗಳನ್ನೂ ಬೇಟೆಯಾಡಿ ತನ್ನಬಲ್ಲ ಸಾಮರ್ಥ್ಯ ಹೊಂದಿವೆ. ಶತಪದಿ, ಸಹಸ್ರಪದಿ, ಚೇಳುಗಳನ್ನು ಸಹ ತಿನ್ನುತ್ತವೆ ಎನ್ನಿತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.