ತುಮಕೂರು: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿದ್ದು, ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕಾಲೇಜಿನ ಪಕ್ಕದ ರಸ್ತೆಯ, ಮಂಜುನಾಥ ಕಲ್ಯಾಣ ಮಂಟಪದ ಎದುರುಗಡೆ ಇರುವ ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಸರ್ ಎಂ.ವಿಶ್ವೇಶ್ವರಯ್ಯ ಭವನ ‘ಸಂಕಲ್ಪ’ದಲ್ಲಿ ಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ. ಪಾಲಿಟೆಕ್ನಿಕ್ ಕಾಲೇಜಿನ ಗೇಟ್‌ಗೆ ಭವನದ ಮಾಹಿತಿ ಇರುವ ಪೋಸ್ಟರ್ ಅಳವಡಿಸಲಾಗಿದೆ. ಕೆಲವರು ಕಾಲೇಜಿಗೆ ಬೀಗ ಹಾಕಿರುವುದು ನೋಡಿ ವಾಪಸ್ ಹೋದರೆ, ಇನ್ನೂ ಕೆಲವರು ಗೇಟ್‌ಗೆ ಅಳವಡಿಸಿರುವ ಭವನದ ವಿಳಾಸ ಹುಡುಕುತ್ತಿದ್ದ ದೃಶ್ಯಗಳು ಕಂಡು ಬಂದವು.
ಪಿಯುಸಿ, ಐಟಿಐ ಉತ್ತೀರ್ಣರಾದವರು ಸರತಿ ಸಾಲಿನಲ್ಲಿ ನಿಂತು ಪ್ರವೇಶಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಪ್ರವೇಶಕ್ಕಾಗಿ ದೂರದ ಊರುಗಳಿಂದ ಬೆಳ್ಳಂಬೆಳಗ್ಗೆಯೇ ಬಸ್ ಹತ್ತಿಕೊಂಡು ಬರುವ ವಿದ್ಯಾರ್ಥಿಗಳು, ಪೋಷಕರಿಗೆ ವಿಶ್ವೇಶ್ವರಯ್ಯ ಭವನದಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಗಂಟೆಗಟ್ಟಲೆ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವೇಶಾತಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಪೂರಕವಾದ ವಾತಾವರಣ ಇಲ್ಲ. ಭವನದ ಹೊರಗಡೆ ಕುರ್ಚಿ ಹಾಕಿಕೊಂಡು ಪ್ರವೇಶಕ್ಕೆ ಅರ್ಜಿ ವಿತರಿಸುತ್ತಿದ್ದಾರೆ. ಇಲ್ಲಿಯೇ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ಕಾಲೇಜಿನ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಅಗತ್ಯ ಪರಿಕರಗಳನ್ನು ಸರ್ ಎಂ.ವಿಶ್ವೇಶ್ವರಯ್ಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಮೇ 9ರಿಂದ ಪ್ರವೇಶಾತಿ ಆರಂಭವಾಗಿದ್ದರೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನಡೆಸುತ್ತಿರುವ ಭವನದ ಕಡೆ ಬರಲು ಸಾಧ್ಯವಾಗಿಲ್ಲ. ‘ಪ್ರವೇಶ ಮಾಡಿಕೊಳ್ಳುತ್ತಿರುವ ಸ್ಥಳದ ಬಗ್ಗೆ ತುಂಬಾ ಜನರಿಗೆ ಮಾಹಿತಿಯೇ ತಿಳಿದಿಲ್ಲ’ ಎಂದು ಕೊರಟಗೆರೆಯ ಶಿವಕುಮಾರ್ ಪ್ರತಿಕ್ರಿಯಿಸಿದರು.
ಕಳೆದ ಎರಡು–ಮೂರು ದಿನಗಳಿಂದ ಪ್ರವೇಶಾತಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ‘ಮೇ 13ರಂದು ಒಂದೇ ದಿನ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಾಹಿತಿ ಹಂಚಿಕೊಂಡರು.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿದಂತೆ ಒಟ್ಟು 6 ಕೋರ್ಸ್‌ಗಳಿವೆ. ಒಂದು ಕೋರ್ಸ್‌ಗೆ 60ರಂತೆ 360 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದೆ.
ಪ್ರವೇಶಾತಿ ಪ್ರಕ್ರಿಯೆ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದೆ. ಪ್ರವೇಶಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ- ಚಂದ್ರಶೇಖರ್ ಪ್ರಾಂಶುಪಾಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.