ADVERTISEMENT

ಮಹಿಳೆಯರ ಪ್ರಯಾಣ ಹೆಚ್ಚಿಸಿದ ‘ಶಕ್ತಿ’

ವಿದ್ಯಾರ್ಥಿಗಳು, ಪ್ರಯಾಣಿಕರು ನಿತ್ಯ ಪರದಾಟ; ಹೆಚ್ಚುವರಿ ಬಸ್‌ಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 4:48 IST
Last Updated 27 ಆಗಸ್ಟ್ 2024, 4:48 IST
ತುಮಕೂರು ನಗರ ಸಾರಿಗೆ
ತುಮಕೂರು ನಗರ ಸಾರಿಗೆ   

ತುಮಕೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ಜಾರಿಯಾದ ನಂತರ ಪುರುಷರಿಗಿಂತ ಸ್ತ್ರೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ಬಸ್‌ಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಂಡು ಬರುತ್ತಿದೆ. ಮೂವರು ಪ್ರಯಾಣಿಕರಲ್ಲಿ ಇಬ್ಬರು ಮಹಿಳೆಯರು ಪ್ರಯಾಣಿಸಿರುವುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಸಾಗಿರುವುದನ್ನು ಗಮನಿಸಿದರೆ ಮಹಿಳಾ ಪ್ರಯಾಣಿಕರ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ವೃದ್ಧಿಸಲಿದೆ ಎಂದು ಹೇಳಲಾಗುತ್ತಿದೆ.

‘ಶಕ್ತಿ’ ಯೋಜನೆಯನ್ನು 2023 ಜೂನ್‌ನಲ್ಲಿ ಜಾರಿ ಮಾಡಿದ್ದು, ಕಳೆದ ಜುಲೈ ತಿಂಗಳ ಅಂತ್ಯದ ವರೆಗೆ (ಯೋಜನೆ ಜಾರಿಯಾದ 14 ತಿಂಗಳ ಅವಧಿ) 7.81 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ವರ್ಗದ ಒಟ್ಟು 12.83 ಕೋಟಿ ಮಂದಿ ಪ್ರಯಾಣಿಸಿದ್ದು, ಸುಮಾರು 5.2 ಕೋಟಿ ಪುರುಷರು ಪ್ರಯಾಣಿಸಿದ್ದಾರೆ. ಜಿಲ್ಲೆ ವ್ಯಾಪ್ತಿಯಲ್ಲಿ 5.25 ಕೋಟಿ ಹಾಗೂ ಹೊರ ಜಿಲ್ಲೆಗಳಿಗೆ 2.55 ಕೋಟಿ ಸ್ತ್ರೀಯರು ಸಂಚರಿಸಿದ್ದಾರೆ. ಸರಾಸರಿ ಪ್ರತಿ ತಿಂಗಳು 55.78 ಲಕ್ಷ ಮಂದಿ ಮಹಿಳೆಯರು ಉಚಿತ ಪ್ರಯಾಣ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ADVERTISEMENT

ಮಹಿಳೆಯರ ಉಚಿತ ಪ್ರಯಾಣದ ಯೋಜನೆಗಾಗಿ ಜಿಲ್ಲೆ ವ್ಯಾಪ್ತಿಯಲ್ಲಿ ₹22,907 ಕೋಟಿ ಹಣವನ್ನು ಸರ್ಕಾರ ಸಾರಿಗೆ ಸಂಸ್ಥೆಗೆ ಪಾವತಿಸಿದೆ. ಸರಾಸರಿ ಪ್ರತಿ ತಿಂಗಳು ₹16.36 ಕೋಟಿಯನ್ನು ‘ಶಕ್ತಿ’ ಯೋಜನೆಗೆ ಪಾವತಿಸಿದಂತಾಗಿದೆ.

ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೇಡಿಕೆಗೆ ತಕ್ಕಷ್ಟು ಬಸ್‌ಗಳ ಸಂಖ್ಯೆಯನ್ನು ಕಾರ್ಯಾಚರಣೆ ಮಾಡಲು ಸಾರಿಗೆ ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಪ್ರತಿ ದಿನವೂ ಜನರಿಂದ ಬಸ್‌ಗಳು ತುಂಬಿ ತುಳುಕುತ್ತಿರುತ್ತವೆ. ತುಮಕೂರು– ಬೆಂಗಳೂರು ನಡುವೆ ಜನರು ನಿತ್ಯ ನಿಂತುಕೊಂಡೇ ಪ್ರಯಾಣ ಮಾಡಬೇಕಾಗಿದೆ. ಸಾಕಷ್ಟು ಮಂದಿ ಹಿಡಿ ಶಾಪ ಹಾಕುತ್ತಲೇ ಪ್ರಯಾಣಿಸುವುದು ಕಂಡುಬರುತ್ತಿದೆ.

ಬೆಂಗಳೂರು ಜಾಲಹಳ್ಳಿ ಕ್ರಾಸ್ ಮೇಲು ಸೇತುವೆ ಮುಚ್ಚಿದ್ದ ಸಮಯದಲ್ಲಿ ಜನರು ನಗರದ ಮೂಲಕ ಬೆಂಗಳೂರಿಗೆ ತೆರಳುವ ಎಲ್ಲಾ ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಮೇಲು ಸೇತುವೆಯಲ್ಲಿ ಬಸ್ ಸಂಚಾರ ಆರಂಭವಾದ ನಂತರ ತುಮಕೂರು– ಬೆಂಗಳೂರು ನಡುವಿನ ನಿಲುಗಡೆ ರಹಿತ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೊರ ಜಿಲ್ಲೆಗಳಿಂದ ಬರುವ ಸಾಕಷ್ಟು ಬಸ್‌ಗಳು ಮೇಲು ಸೇತುವೆಯಲ್ಲಿ ಸಂಚರಿಸುವುದಿಲ್ಲ. ಹಾಗಾಗಿ ತುಮಕೂರಿನಿಂದ ಹೊರಡುವ ಬಸ್‌ಗಳಲ್ಲಿ ದಟ್ಟಣೆ ಕಂಡು ಬಂದಿದ್ದು, ಜನರು ನಿಂತುಕೊಂಡೇ ಪ್ರಯಾಣಿಸುತ್ತಿದ್ದಾರೆ. ತುಮಕೂರು– ಬೆಂಗಳೂರು ನಡುವಿನ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಶಾಲಾ, ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳು ಪ್ರತಿನಿತ್ಯವೂ ಸರ್ಕಸ್ ಮಾಡಬೇಕಿದೆ. ಬಸ್‌ಗಳಿಗೆ ಹತ್ತಲು ಸಾಕಷ್ಟು ಮಕ್ಕಳಿಗೆ ಸಾಧ್ಯವೇ ಆಗುತ್ತಿಲ್ಲ. ಶಾಲೆ, ಕಾಲೇಜಿಗೆ ಹೋಗಲಾಗದೆ ಶಿಕ್ಷಣದಿಂದ ವಂಚಿತರಾದವರ ಸಂಖ್ಯೆಯೂ ಹೆಚ್ಚುತ್ತಿದೆ. ನಮ್ಮ ಬಗ್ಗೆಯೂ ಗಮನ ಹರಿಸಬೇಕು ಎಂದು ವಿದ್ಯಾರ್ಥಿ ಮನೋರಂಜನ್ ಒತ್ತಾಯಿಸುತ್ತಾರೆ.

ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶದಲ್ಲೇ ವಿದ್ಯಾರ್ಥಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ಬಸ್ ಪ್ರಯಾಣ ಆರಂಭಿಸುವ ಸ್ಥಳದಲ್ಲೇ ಸಾಕಷ್ಟು ಮಂದಿ ಹತ್ತಿರುತ್ತಾರೆ. ಮುಂದಿನ ನಿಲ್ದಾಣಗಳಲ್ಲಿ ಮತ್ತಷ್ಟು ಜನರು ಬಸ್ ಏರುತ್ತಾರೆ. ನಂತರದ ನಿಲ್ದಾಣಗಳಲ್ಲಿ ಬಸ್ ಏರಲು ಸ್ಥಳಾವಕಾಶ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಜನರ ನಿತ್ಯದ ಪರದಾಟವಾಗಿದೆ.

ತುಮಕೂರು ನಗರದಲ್ಲೂ ನಗರ ಸಾರಿಗೆ ಬಸ್‌ಗಳು ಜನರಿಂದ ತುಂಬಿರುತ್ತವೆ. ಈಗ ಸಂಚರಿಸುತ್ತಿರುವ ಬಸ್‌ಗಳು ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಾಲದಾಗಿದ್ದು, ಸಾಮಾನ್ಯ ಪ್ರಯಾಣಿಕರು ಬಸ್ ಏರಲು ಸಾಧ್ಯವೇ ಆಗುತ್ತಿಲ್ಲ. ಸಾಕಷ್ಟು ಮಂದಿಗೆ ಆಟೊ ಪ್ರಯಾಣ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಿಗೂ ಆಟೊದಲ್ಲಿ ಸಂಚರಿಸುವಂತಾಗಿದೆ.

71 ಹೆಚ್ಚುವರಿ ಬಸ್
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ಎಲ್ಲವನ್ನೂ ಸರಿಪಡಿಸಿದ್ದೇವೆ’ ಎಂಬ ಉತ್ತರ ಬರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ‘ಹೊಂದಾಣಿಕೆ ಮಾಡಿಕೊಂಡು ಪ್ರಯಾಣಿಸಬೇಕು’ ಎನ್ನುತ್ತಾರೆ. ಜಿಲ್ಲೆಯ ವಿವಿಧ ಘಟಕಗಳಿಗೆ ಹೊಸದಾಗಿ 71 ಬಸ್‌ಗಳು ಸೇರ್ಪಡೆಯಾಗಿದ್ದು ಪ್ರಸ್ತುತ 701 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಒಟ್ಟಾರೆಯಾಗಿ 635 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.