ತುಮಕೂರು: ಸಾಕಷ್ಟು ಮಂದಿಗೆ ಬಾಡೂಟದ ರುಚಿ ಉಣಿಸುತ್ತಿದ್ದ ಕುರಿಗಾಹಿಗಳಿಗೂ ಈ ಲಾಕ್‌ಡೌನ್ ಕಹಿ ಅನುಭವ ನೀಡುತ್ತಿದೆ.
ಜಿಲ್ಲೆಯ ವಿವಿಧೆಡೆ ನಿರ್ದಿಷ್ಟ ವಾರ, ಸ್ಥಳದಲ್ಲಿ ನಡೆಯುತ್ತಿದ್ದ ಸಂತೆಗಳು ಬಂದ್ ಆಗಿವೆ. ಇದರಿಂದ ಕುರಿ– ಮೇಕೆಗಳ ಮಾರಾಟ ಸ್ಥಗಿತಗೊಂಡು, ಹಣದ ವಹಿವಾಟು ಬಹುತೇಕ ನಿಂತಿದೆ.
ಶಿರಾದಲ್ಲಿ ಪ್ರತಿ ಮಂಗಳವಾರ, ಚಿಕ್ಕನಾಯಕನಹಳ್ಳಿಯಲ್ಲಿ ಪ್ರತಿ ಸೋಮವಾರ ನಡೆಯುತ್ತಿದ್ದ ಕುರಿ ಸಂತೆಯ ಬಯಲುಗಳು ಈಗ ಬಿಕೋ ಎನ್ನುತ್ತಿವೆ. ಕೊರಟಗೆರೆಯ ಅಕ್ಕಿರಾಂಪುರದಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ಮೇಳದಲ್ಲಿ ಸಾವಿರಾರು ಕುರಿಗಳು ತುಂಬಿರುತ್ತಿದ್ದವು. ಈಗ ಅಲ್ಲಿ ಕೇವಲ ನಿಶಬ್ಧ ಮನೆಮಾಡಿದೆ.
ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಂತೆಗಳಿಂದ ಮುಂಬೈ, ಬೆಂಗಳೂರು, ಹಾಸನ, ಮಂಡ್ಯ, ಮೈಸೂರು, ಅರಸಿಕೆರೆ, ಚನ್ನರಾಯಪಟ್ಟಣಗಳಿಗೆ ಸಾವಿರಾರು ಕುರಿಗಳು ಲಾರಿಗಳಲ್ಲಿ ಲೋಡ್‌ಗಟ್ಟಲೇ ರವಾನೆ ಆಗುತ್ತಿದ್ದವು. ಇದರಿಂದ ಕುರಿಗಾಹಿಗಳು, ಮಧ್ಯವರ್ತಿಗಳು, ವ್ಯಾಪಾರಿಗಳ ಬಳಿ ಕೈತುಂಬ ಹಣ ಹರಿದಾಡುತ್ತಿತ್ತು. ಈಗ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ.
ಕುರಿಗಳ ಹಿಂಡಿನಲ್ಲಿ ಮರಿಗಳ ಸಂಖ್ಯೆ ಹೆಚ್ಚಿದಂತೆ ಹೆಣ್ಣು ಮರಿ ಉಳಿಸಿಕೊಂಡು, ಟಗರುಗಳನ್ನು ಮಾರುತ್ತಾ, ಜೀವನೋಪಾಯಕ್ಕೆ ಆದಾಯ ಕಂಡುಕೊಳ್ಳುತ್ತಿದ್ದೆವು. ಇದರಿಂದ ಕುರಿಗಾಹಿಗಳ ಎಷ್ಟೋ ಸಣ್ಣ ಕುಟುಂಬಗಳು ನಿತ್ಯದ ಖರ್ಚುಗಳನ್ನು ನಿಭಾಯಿಸುತ್ತಿದ್ದವು ಎಂದು ಚಿಕ್ಕನಾಯಕನಹಳ್ಳಿಯ ರೇವಣಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವರಕೇರಿ ಸಿದ್ದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಬ್ಬದ ಸಮಯದಲ್ಲಿ ಒಳ್ಳೆ ರೇಟ್ ಸಿಗುತ್ತಿತ್ತು. ನಾಲ್ಕು ಕಾಸು ದಕ್ಕುತ್ತಿತ್ತು. ಅದರಿಂದ ಮನೆ ನಿರ್ವಹಣೆ ಮಾಡಿಕೊಂಡು, ಕುರಿಗಳಿಗೆ ಮೇವು, ಮೆಡಿಷನ್‌ಗೆ ಹೊಂದಿಸುತ್ತಿದ್ದರು. ಈಗಅದಕ್ಕೆಲ್ಲ ಕಲ್ಲು ಬಿದ್ದಿದೆ’ ಎಂದು ಶಿರಾ ತಾಲ್ಲೂಕಿನ ಶ್ರೀರಂಗ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಡಿ.ವೈ.ಗೋಪಾಲ ಹೇಳಿದರು.
ಕುರಿ ಸಾವಿಗೆ ಪರಿಹಾರ ಇಲ್ಲ
ರಾಜ್ಯ ಸರ್ಕಾರ ರೂಪಿಸಿದ್ದ ಅನುಗ್ರಹ ಕೊಡುಗೆ ಯೋಜನೆಯಡಿ ಕುರಿ–ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಪರಿಹಾರ ನೀಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ.
ಮೃತಪಟ್ಟ ಆರು ತಿಂಗಳು ಮೇಲ್ಪಟ್ಟ ಕುರಿಗೆ ₹ 5 ಸಾವಿರ, 3ರಿಂದ 6 ತಿಂಗಳ ಕುರಿಗೆ ₹2,500 ಪರಿಹಾರ ಧನ ಕೊಡಲಾಗುತಿತ್ತು. ಈ ಯೋಜನೆ ಮುಂದುವರೆಸುವಂತೆ ಕುರಿ ಮತ್ತು ಉಣ್ಣೆ ಉತ್ಪಾದಕ ಸಂಘದ ಅಧ್ಯಕ್ಷರಾದ ಡಿ.ವೈ.ಗೋಪಾಲ, ವರಕೇರಿ ಸಿದ್ದಯ್ಯ ಒತ್ತಾಯಿಸಿದ್ದಾರೆ.
*
10,60,572:ಪಶುಪಾಲನಾ ಇಲಾಖೆ ಗಣತಿ ಪ್ರಕಾರ ಜಿಲ್ಲೆಯಲ್ಲಿನ ಕುರಿಗಳು
3,26,890:ಜಿಲ್ಲೆಯಲ್ಲಿನ ಮೇಕೆಗಳು
*
ಮಾಂಸ ಮಾರಾಟಕ್ಕೆ ಅನುಮತಿ ಇದೆ. ಹಾಗಾಗಿ ಮಾಂಸ ಮಾರಾಟಗಾರರು ಕುರಿಗಳನ್ನು ಕೊಂಡು, ವಾಹನಗಳಲ್ಲಿ ಸಾಗಿಸಲು ಅನುಮತಿ ನೀಡಲಾಗಿದೆ.
-ಕೆ.ಜಿ.ನಂದೀಶ್, ಉಪನಿರ್ದೇಶಕ (ಪ್ರಭಾರ), ಪಶುಪಾಲನಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.