ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯಲ್ಲಿ ಅಂಬೇಡ್ಕರ್ ಭವನಗಳ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಉದ್ಘಾಟನೆಯಾಗಿಲ್ಲ.
ಬುಕ್ಕಾಪಟ್ಟಣ ಹೋಬಳಿ ಹುಯಿಲ್ ದೊರೆ, ರಂಗನಾಥಪುರ, ಕುಣಗಾಟನಹಳ್ಳಿ, ಸುಬಾಬಲ್
ರಂಗಾಪುರದಲ್ಲಿ ತಲಾ ₹20 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಂಡರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉದ್ಘಾಟನೆಯಾಗಿಲ್ಲ.
ಬುಕ್ಕಾಪಟ್ಟಣ ಹೋಬಳಿ ಆಡಳಿತಾತ್ಮಕವಾಗಿ ಶಿರಾ ತಾಲ್ಲೂಕಿಗೆ ಸೇರಿದ್ದರೂ ಚಿಕ್ಕನಾಯಕನಹಳ್ಳಿ ವಿಧಾನಸಭೆ ವ್ಯಾಪ್ತಿಗೆ ಸೇರುವುದರಿಂದ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ತಾಳಲಾಗುತ್ತಿದ್ದು, ಅಧಿಕಾರಿಗಳು ತಾಲ್ಲೂಕಿನ ಇತರೆ ಹೋಬಳಿಗೆ ಕೊಟ್ಟಷ್ಟು ಪ್ರಾಮುಖ್ಯತೆ ಬುಕ್ಕಾಪಟ್ಟಣ ಹೋಬಳಿ
ನೀಡುವುದಿಲ್ಲ ಎನ್ನುವ ದೂರು ಸ್ಥಳೀಯರದ್ದು.
ಅಂಬೇಡ್ಕರ್ ಭವನಗಳು ಉದ್ಘಾಟನೆಗೊಂಡಿದ್ದರೆ ಜನರ ಉಪಯೋಗಕ್ಕೆ ಬರುತ್ತಿದ್ದವು. ಆದರೆ ಉದ್ಘಾಟನೆ ಮಾಡದೆ ಬೀಗ ಹಾಕಿರುವುದರಿಂದ ಭವನದ ಸುತ್ತ ಗಿಡ, ಗಂಟಿ ಬೆಳೆದು ವಿಷ ಜಂತುಗಳ ತಾಣವಾಗುತ್ತಿದ್ದು ಒಳಗೆ ಹೋಗಲು ಸಾಧ್ಯವಾಗದಂತಾಗಿದೆ.
ಹುಯಿಲ್ ದೊರೆ ಗ್ರಾಮದಲ್ಲಿ ಶಾಲೆ ಸಮೀಪದಲ್ಲಿಯೇ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ. ಜೊತೆಗೆ ಅಲ್ಲಿಯೇ ನೀರಿನ ಸಿಸ್ಟನ್ ಇದ್ದು ಮಹಿಳೆಯರು ನೀರು ಹಿಡಿಯಲು ಬಂದಾಗ ಹಲವರು ಹಾವುಗಳನ್ನು ಕಂಡು ಭಯಭೀತರಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುವಂತೆ ಕಟ್ಟಡದ ಕಾಮಗಾರಿ ಪೂರ್ಣವಾಗಿದ್ದು, ವಿದ್ಯುತ್ ಸಂಪರ್ಕ ನೀಡಬೇಕಿದೆ. ಒಂದು ವಾರದಲ್ಲಿ ವಿದ್ಯುತ್ ಸಂಪರ್ಕ ದೊರೆಯಲಿದ್ದು ನಂತರ ಭವನಗಳನ್ನು ಹಸ್ತಾಂತರ ಮಾಡಲಾಗುವುದು ಎನ್ನುತ್ತಾರೆ.
ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಿರುವ ಅಂಬೇಡ್ಕರ್ ಭವನ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ನಿರ್ವಹಣೆ ಇಲ್ಲದೆ ಹೊಸ ಕಟ್ಟಡ ಶಿಥಿಲವಾಗುವಂತಾಗುವ ಪರಿಸ್ಥಿತಿ ನಿರ್ಮಾಣಕ್ಕೆ ಮೊದಲೇ ಅಧಿಕಾರಿಗಳು ಎಚ್ಚೆತ್ತು ಭವನಗಳನ್ನು ಉದ್ಘಾಟಿಸಿ ಜನಪರ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಲಿ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.