ತುಮಕೂರು: ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಯವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಶನಿವಾರ ನೆರವೇರಿತು. ಸ್ಮಾಮೀಜಿ ಸ್ಮರಣೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಸರಳವಾಗಿ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಸಾಕಷ್ಟು ಜೋರಾಗಿಯೇ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಅನ್ನ, ಶಿಕ್ಷಣ, ಆಶ್ರಯ ನೀಡಿದ ತ್ರಿವಿಧ ದಾಸೋಹಿಯ ಗದ್ದುಗೆ ದರ್ಶನ ಪಡೆದು ಭಕ್ತರು ನಮಿಸಿದರು.
ಸ್ವಾಮೀಜಿ ಲಿಂಗೈಕ್ಯರಾದ ಜ. 21ಅನ್ನು ರಾಜ್ಯದಾದ್ಯಂತ ‘ದಾಸೋಹ ದಿನ’ವನ್ನಾಗಿ ಆಚರಣೆ ಮಾಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ, ಈ ಬಾರಿ ಸರ್ಕಾರದ ವತಿಯಿಂದ ಇಂತಹ ಕಾರ್ಯಕ್ರಮಗಳು ನಡೆಯಲಿಲ್ಲ. ಮಠದ ವತಿಯಿಂದ ಆಚರಿಸಲಾಯಿತು.
ತಮ್ಮ ಗುರು ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ತೆರಳಿದ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಪೂಜೆ ನೆರವೇರಿಸಿದರು.
ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, ಪೂಜಾ ಕೈಂಕರ್ಯಗಳು ನಡೆದವು. ನಂತರ ಇತರ ಸ್ವಾಮೀಜಿಗಳು ಭಕ್ತಿಯಿಂದ ನಮಿಸಿದರು. ಭಕ್ತರು ದರ್ಶನ ಪಡೆದರು. ರುದ್ರಾಕ್ಷಿ ಮಂಟಪದಲ್ಲಿ ಸ್ವಾಮೀಜಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು. ಗದ್ದುಗೆ ಮಂದಿರದ ಮುಂಭಾಗದಿಂದ ಪ್ರಾರಂಭವಾಗಿ ವಸ್ತುಪ್ರದರ್ಶನದ ಆವರಣದವರೆಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.