ತಿಪಟೂರು: ‘ಸಿರಿಗೆರೆಯ ತರಳಬಾಳು ಮಠದ ಪೀಠಾಧಿಪತಿಯಾಗಿ ಕೊನೆ ಉಸಿರು ಇರುವವರೆಗೂ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯೇ ಮುಂದುವರಿಯಬೇಕು’ ಎಂದು ಮಠದ ಭಕ್ತರು ಒತ್ತಾಯಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿರುವ ಮೂಲ ಸಂಸ್ಥಾನ ಮಠದಲ್ಲಿ ನಡೆದ ಭಕ್ತರು ಸಭೆಯಲ್ಲಿ ಒತ್ತಾಯಿಸಿದರು.
ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ವಿರುದ್ಧ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಗುಂಪು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಅವರನ್ನು ಮಠದಿಂದ ಬಹಿಷ್ಕರಿಸಬೇಕು ಎಂದರು.
ಸಾಧು ವೀರಶೈವ ಸಮಾಜದ ಅಧ್ಯಕ್ಷ ಪಟ್ರೇಹಳ್ಳಿ ನಂಜುಡಪ್ಪ ಮಾತನಾಡಿ, ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿಸಿ ಸಿರಿಗೆರೆ ಎಂಬ ಪುಟ್ಟ ಹಳ್ಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಸ್ವಾಮೀಜಿ ವಿರುದ್ಧ ಮಾತನಾಡಿರುವ ಶಾಮನೂರು ಶಿವಶಂಕರಪ್ಪ, ಬಿ.ಸಿ ಪಾಟೀಲ್ ಹಾಗೂ ಇತರರು ಸ್ವಾಮೀಜಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಹರಿಸಮುದ್ರ ಗಂಗಾಧರ್ ಮಾತನಾಡಿ, ಸ್ವಾಮೀಜಿ ಆರೋಗ್ಯವಾಗಿದ್ದಾರೆ. ರಾಜಕಾರಣಿಗಳು ಅವರ ವೈಯಕ್ತಿಕ ಹಿತಸಾಧನೆಗೆ ಸ್ವಾಮೀಜಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಆಕ್ಷಮ್ಯ ಎಂದರು.
ನಾಗರಾಜು ಹಾಲ್ಕುರಿಕೆ ಮಾತನಾಡಿ, ಮಠದ ವಿರುದ್ಧ ಮಾತನಾಡುತ್ತಿರುವ ಕಿಡಿಗೇಡಿಗಳು ಮಠದ ಸಹಕಾರದಿಂದ ಬೆಳೆದು ಹೆಮ್ಮರವಾಗಿದ್ದಾರೆ ಎಂದರು.
ಸಭೆಯಲ್ಲಿ ತಾಲ್ಲೂಕಿನ 25 ಗ್ರಾಮಗಳ ಭಕ್ತರು ಹಾಗೂ ಕಾರ್ಯದರ್ಶಿ ವೀರಭದ್ರಪ್ಪ, ರಾಜಶೇಖರ್ ಚಿಕ್ಕಬಿದರೆ, ಚಂದ್ರಶೇಖರ್, ಚಿದಾನಂದ್, ಆನಂದಮೂರ್ತಿರಾಮನಹಳ್ಳಿ, ಉಮಾಶಂಕರ್ ಬಳವನೇರಲು, ಜಗದೀಶ್, ಪ್ರಸನ್ನಕುಮಾರ್, ಪರಮೇಶ್, ರಾಜು, ಉಮಾಮಹೇಶ್, ಗಂಗಾಧರ್, ಚಿದಾನಂದ್ ಮತ್ತಿಹಳ್ಳಿ, ವಿಜಯಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.