ತುಮಕೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 112ನೇ ಜಯಂತಿ, ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಡಿನ ವಿವಿಧ ಕಡೆಯ ಭಕ್ತರು ಬಂದಿದ್ದಾರೆ.
ಬೆಳಿಗ್ಗೆಯಿಂದಲೇ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ.
ಬೆಳಿಗ್ಗೆ ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಶಿವಕುಮಾರ ಸ್ವಾಮೀಜಿ ಅವರ ಗುರುಗಳಾದ ಉದ್ಧಾನಶ್ರೀಗಳ ಗದ್ದುಗೆಗೆ ನಂತರ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿದರು.
112 ಮಕ್ಕಳಿಗೆ ನಾಮಕರಣ: ಸ್ವಾಮಿಜಿಯವರ 112ನೇ ಜನ್ಮ ದಿನದ ಪ್ರಯುಕ್ತ ಮಠದಲ್ಲಿ 112ಮಕ್ಕಳಿಗೆ ಶಿವಕುಮಾರಶ್ರೀಗಳ ಹೆಸರು ನಾಮಕರಣ ನಡೆಯಲಿದೆ.
ಸ್ವಾಮೀಜಿ ಅವರ ಗದ್ದುಗೆ ಮಂಟಪ ಸೇರಿದಂತೆ ಮಠದ ಅಂಗಳ ಪುಷ್ಪಾಲಂಕಾರ ಮಾಡಲಾಗಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 8 ಕೊಪ್ಪಲುಗಳಲ್ಲಿಪ್ರಸಾದ ವ್ಯವಸ್ಥೆ ಸೇರಿ ಸಕಲ ಸಿದ್ಧತೆಯನ್ನು ಮಠವು ಮಾಡಿದೆ.
ಬೆಳಿಗ್ಗೆಸ್ವಾಮೀಜಿ ಪ್ರತಿಮೆ ಮೆರವಣಿಗೆ ನಡೆಸಲಾಯಿತು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದಾರೆ.
ಚಿತ್ರದುರ್ಗದ ಶಿವಮೂರ್ತಿ ಮುರುಘಾಶರಣರು, ಉಡುಪಿ ಪೇಜಾವರಮಠದ ಜಗದ್ಗುರು ವಿಶ್ವೇಶತೀರ್ಥ ಸ್ವಾಮೀಜಿ, ಉಜ್ಜಯಿನಿ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಮುಂಡರಗಿ ಸಂಸ್ಥಾನಮಠದ ಅನ್ನದಾನ ಸ್ವಾಮೀಜಿ ಪಾಲ್ಗೊಂಡಿದ್ದಾರೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಇರುವುದರಿಂದ ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳನ್ನು ಮಠದ ಆಡಳಿತ ಮಂಡಳಿ ಅತಿಥಿಗಳಾಗಿ ಆಹ್ವಾನಿಸಿಲ್ಲ.
111ನೇ ಜಯಂತ್ಯುತ್ಸವ ಕಾರ್ಯಕ್ರಮ ನಡೆವಾಗ ವಿಧಾನಸಭಾ ಚುನಾವಣೆ ಇದ್ದುದರಿಂದ ನೀತಿ ಸಂಹಿತೆ ಜಾರಿಯಲ್ಲಿತ್ತು. ಆಗಲೂ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಅತಿಥಿಗಳಾಗಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.