ADVERTISEMENT

ಹಸುಗಳನ್ನು ಮನೆಯ ಸದಸ್ಯರಂತೆ ಭಾವಿಸಿ: ಸಿದ್ದಲಿಂಗ ಸ್ವಾಮೀಜಿ

ಗೋಹತ್ಯೆ ನಿಷೇಧ ಕಾಯ್ದೆಗೆ ಸಿದ್ಧಗಂಗಾ ಮಠದ ಬೆಂಬಲ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 8:00 IST
Last Updated 10 ಡಿಸೆಂಬರ್ 2020, 8:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಎನ್ನುವುದು ಜನರ ಬಹಳ ದಿನಗಳ ಬೇಡಿಕೆ ಆಗಿತ್ತು. ಕೆಲವು ರಾಜ್ಯಗಳಲ್ಲಿ ಈಗಾಗಲೇ ಕಾಯ್ದೆ ಜಾರಿಯಲ್ಲಿದೆ. ಎಲ್ಲವನ್ನೂ ಪರಿಶೀಲಿಸಿದ ನಂತರವೇ ಗೋ ಸಂತತಿ ಮತ್ತು ನಾಟಿ ಹಸುಗಳ ಸಂತತಿ ಉಳಿಸಬೇಕು ಎನ್ನುವ ಅಭಿಲಾಷೆಯಿಂದ ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಇದು ಒಳ್ಳೆಯದೆ. ಗೋವುಗಳ ಆರೋಗ್ಯವಾಗಿರುವವರೆಗೂ ಚೆನ್ನಾಗಿ ದುಡಿಸಿಕೊಳ್ಳುತ್ತೇವೆ. ರಾಸು ನಿಶ್ಯಕ್ತವಾದಾಗ ಅದನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತೇವೆ. ಇದು ನೋವಿನ ಸಂಗತಿ. ರೈತರು ಸೀಮೆಹಸುಗಳು ಹೆಣ್ಣು ಕರು ಹಾಕಿದರೆ ಅವುಗಳನ್ನು ಸಾಕುವರು, ಅದೇ ಗಂಡು ಕರು ಹಾಕಿದರೆ ಹೃದಯಹೀನರಾಗಿ ಮಾರಾಟ ಮಾಡುವರು ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮಲ್ಲಿ ಮಾಂಸಾಹಾರಿಗಳು, ಸಸ್ಯಾಹಾರಿಗಳು ಇದ್ದಾರೆ. ಅದು ಅವರವರ ಆಹಾರ ಕ್ರಮ. ಅದನ್ನು ನಾವು ಪ್ರಶ್ನೆ ಮಾಡಬಾರದು. ನನ್ನ ಒಟ್ಟಾರೆ ಆಶಯ ಎಂದರೆ ರೈತರೇ ಜಾಗೃತರಾಗಿ ಹಸುಗಳನ್ನು ಮನೆಯ ಸದಸ್ಯನ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.

ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಸರ್ಕಾರವಾಗಲಿ ಕಾಳಜಿವಹಿಸಲೇಬೇಕು. ದೇಶ ನಿಂತಿರುವುದೇ ಅವರಿಂದ. ರೈತರೇ ನಮಗೆ ಅನ್ನದಾತರು. ರೈತರಿಗೆ ಅನ್ಯಾಯವಾಗುವ ಯಾವುದೇ ಕಾನೂನನ್ನು ಎಲ್ಲರೂ ವಿರೋಧಿಸಬೇಕು.

ADVERTISEMENT

ಎಪಿಎಂಸಿಗಳನ್ನು ರದ್ದು ಮಾಡುವುದಿಲ್ಲ ಎಂದು ಸರ್ಕಾರವೇ ಹೇಳಿದೆ. ಯಾವುದೇ ಉತ್ಪನ್ನವನ್ನು ಹೆಚ್ಚು ಬೆಲೆ ದೊರೆಯುವ ಕಡೆ ಮಾರಾಟ ಮಾಡಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಇದೆಲ್ಲವನ್ನೂ ನೋಡಿದರೆ ಎಪಿಎಂಸಿ ಕಾಯ್ದೆ ತಿದ್ದುಪಡಿ ನನಗೆ ಒಳ್ಳೆಯದು ಎನಿಸುತ್ತದೆ. ಆದರೆ ರೈತರು ಇದನ್ನು ವಿರೋಧಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ರೈತರ ಜತೆ ಮಾತುಕತೆ ನಡೆಸುತ್ತಿದೆ. ರೈತರ ಪರವಾಗಿ ತೀರ್ಮಾನಗಳು ಬರಲಿ ಎನ್ನುವುದು ನಮ್ಮ ಆಶಯ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.