ADVERTISEMENT

ಮುಖ್ಯಮಂತ್ರಿ ಕುರ್ಚಿಗೆ ಟವಲ್ ಹಾಕಿ ಕುಳಿತಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 6:43 IST
Last Updated 22 ಜುಲೈ 2022, 6:43 IST
ಶಿರಾ ನಗರದ ಗ್ರಾಮ ದೇವತೆ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ
ಶಿರಾ ನಗರದ ಗ್ರಾಮ ದೇವತೆ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ   

ತುಮಕೂರು: ಮುಖ್ಯಮಂತ್ರಿ ಕುರ್ಚಿಗೆ ಟವಲ್ ಹಾಕಿಕೊಂಡು ನಾನು ಕುಳಿತಿಲ್ಲ. ಜನತೆ ನೀಡುವ ತೀರ್ಪಿಗೆ ಎಲ್ಲರೂ ಬದ್ದವಾಗಿರುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶಿರಾ ನಗರದ ಗ್ರಾಮ ದೇವತೆ ದುರ್ಗಮ್ಮ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು, ಮುಖ್ಯಮಂತ್ರಿ ಕುರ್ಚಿಗೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಹೋರಾಟ ನಡೆಯುತ್ತಿಲ್ಲ, ಬಿಜೆಪಿ ಪಕ್ಷದಲ್ಲಿ ಸಹ ಹೋರಾಟ ನಡೆಯುತ್ತಿದೆ. ಎಲ್ಲಾ ಪಕ್ಷಗಳಲ್ಲೂ ಇದು ಸರ್ವೇ ಸಾಧಾರಣ. ಚುನಾವಣೆಯಲ್ಲಿ ಜನತೆ ನೀಡುವ ತೀರ್ಪಿಗೆ ಎಲ್ಲರೂ ಬದ್ದವಾಗಬೇಕಾಗುವುದು ಎಂದರು.

ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಿ’ ರಿಪೋರ್ಟ್‌ ಸಲ್ಲಿಸಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲಿನ್ ಚಿಟ್ ನೀಡುತ್ತಾರೆ ಎನ್ನುವ ಸಂದೇಹ ಮೊದಲಿನಿಂದ ಇತ್ತು. ಸಂತೋಷ್ ಡೆತ್ ನೋಟ್ ನಲ್ಲಿ ಈಶ್ವರಪ್ಪ ಅವರ ಹೆಸರು ನಮೂದಿಸಿರುವ ದಾಖಲೆ ಇದ್ದರೂ ಸಹ ಸೂಕ್ತವಾಗಿ ತನಿಖೆ ನಡೆಸದೆ ಕ್ಲೀನ್ ಚಿಟ್ ನೀಡಲಾಗಿದ್ದು, ನ್ಯಾಯಾಂಗ ತನಿಖೆ ನಡೆಸಿದರೆ ಸತ್ಯ ಹೋರಬರಲಿದೆ ಎಂದು ಹೇಳಿದರು.

ADVERTISEMENT

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ಶೇ 33ರಷ್ಟು ಮೀಸಲಾತಿ ನೀಡುವಂತೆ ಕೆ.ಭಕ್ತವತ್ಸಲ ಆಯೋಗ ಮಾಡಿರುವ ಶಿಪಾರಸು ವರದಿಯನ್ನು ನಾನು ನೋಡಿಲ್ಲ, ಆದರೆ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ದೊರೆಯಲೇ ಬೇಕು ಎಂದರು.

ಈವರೆಗೆ ಹುಟ್ಟುಹಬ್ಬವನ್ನು ನಾನು ಎಂದೂ ಆಚರಣೆ ಮಾಡಿಕೊಂಡಿಲ್ಲ, ಆ. 3 ಕ್ಕೆ ನನಗೆ 75 ವರ್ಷ ಆಗುವುದರಿಂದ ಅಭಿಮಾನಿಗಳು ಹಾಗೂ ಸ್ನೇಹಿತರ ಒತ್ತಡಕ್ಕೆ ಮಣಿದು ಒಪ್ಪಿಗೆ ನೀಡಿದ್ದೇನೆ. ಇದರ ಮೂಲಕ ಅಧಿಕಾರ ಪಡೆಯುವ ಇರಾದೆ ನನಗೆ ಇಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.