ADVERTISEMENT

ಕುಸಿದ ತಾತ್ಕಾಲಿಕ ರಸ್ತೆ | ಶಿರಾ ಗೇಟ್ ರಸ್ತೆ ಮತ್ತೆ ಬಂದ್: ಹೆಚ್ಚಿದ ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 14:17 IST
Last Updated 6 ಜೂನ್ 2024, 14:17 IST
ತುಮಕೂರಿನ ಅಮಾನಿಕೆರೆ ಕೋಡಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಮುಚ್ಚಲಾಗಿದೆ
ತುಮಕೂರಿನ ಅಮಾನಿಕೆರೆ ಕೋಡಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಮುಚ್ಚಲಾಗಿದೆ   

ತುಮಕೂರು: ನಗರದ ಶಿರಾ ಗೇಟ್ ರಸ್ತೆಯ ಅಮಾನಿಕೆರೆ ಕೋಡಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಬುಧವಾರ ರಾತ್ರಿ ಸುರಿದ ಮಳೆಗೆ ಕುಸಿದಿದ್ದು, ಗುರುವಾರದಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮರಳು, ಜಲ್ಲಿ ಸುರಿದು ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಿ ದ್ವಿಚಕ್ರ ವಾಹನ, ಕಾರು, ಆಟೊಗಳಂತಹ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಕಾರು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಳೆಯಿಂದಾಗಿ ರಸ್ತೆಯ ಒಂದು ಭಾಗ ಕುಸಿದಿದೆ. ಕೆರೆಯ ಏರಿ ಪಕ್ಕದಲ್ಲಿರುವ ಕಾಲುವೆಯಲ್ಲಿ ಮಳೆ ನೀರು ರಭಸವಾಗಿ ಹರಿದು ಬಂದಿದ್ದು, ರಸ್ತೆ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ.

ಈಗ ರಸ್ತೆಯನ್ನು ಬಂದ್ ಮಾಡಿದ್ದು, ಬೈಕ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ನಿಲ್ಲಿಸಲಾಗಿದೆ. ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಒಂದು ವಾರ ಕಳೆಯುವುದರ ಒಳಗಾಗಿ ಮತ್ತೆ ಸಂಚಾರ ಸ್ಥಗಿತಗೊಂಡಿದ್ದು, ಆ ಭಾಗದ ಜನರು ಪರದಾಡುವಂತಾಗಿದೆ.

ADVERTISEMENT

ಅಮಾನಿಕೆರೆ ಕೋಡಿ ಹಳ್ಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ನಂತರ ಶಿರಾ ಗೇಟ್ ರಸ್ತೆ ಮೂಲಕ ಸಂಚರಿಸುವವರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ನಂತರ ತಾತ್ಕಾಲಿಕ ರಸ್ತೆ ನಿರ್ಮಿಸಿ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ತಾತ್ಕಾಲಿಕ ರಸ್ತೆಯ ಸ್ಥಿತಿ ಕಂಡವರು ಒಂದು ಸಣ್ಣ ಮಳೆ ಬಂದರೂ ಕೊಚ್ಚಿಕೊಂಡು ಹೋಗಲಿದೆ ಎಂದು ಅಂದೇ ಎಚ್ಚರಿಸಿದ್ದರು. ಗಟ್ಟಿಮುಟ್ಟಾದ ರಸ್ತೆ ನಿರ್ಮಿಸಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

ನಗರದಿಂದ ಶಿರಾ ಗೇಟ್ ಮೂಲಕ ರಾಷ್ಟ್ರೀಯ ಹೆದ್ದಾರಿ ಕಡೆಗೆ ಹೋಗುವವರು, ಶಿರಾ ಹಾಗೂ ಕೊರಟಗೆರೆ ರಸ್ತೆ ತಲುಪುವವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಬ್ಬಿ ಗೇಟ್‌ನಿಂದ ಶಿರಾ ಗೇಟ್‌ಗೆ ಸಂಪರ್ಕ ಕಲ್ಪಿಸುವ ದಿಬ್ಬೂರು ರಿಂಗ್ ರಸ್ತೆ ಕಾಮಗಾರಿ ತೆವಳುತ್ತಾ ಸಾಗಿದೆ. ಇದೇ ಮಾರ್ಗದಲ್ಲಿ ಅಮಾನಿಕೆರೆ ಕೋಡಿ ನೀರು ಹರಿಯುತ್ತಿದ್ದು, ಆ ಜಾಗದಲ್ಲಿ ಸೇತುವೆ ನಿರ್ಮಾಣ ಕೆಲಸ ಪೂರ್ಣಗೊಂಡಿಲ್ಲ. ಈಗ ಮಳೆಯಿಂದಾಗಿ ಆ ಜಾಗದಲ್ಲಿ ನೀರು ತುಂಬಿಕೊಂಡಿದ್ದು, ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಹನುಮಂತಪುರದ ಮೂಲಕ ಐದಾರು ಕಿ.ಮೀ ಸುತ್ತಿಕೊಂಡು ಹೆದ್ದಾರಿ ತಲುಪಬೇಕಿದೆ.

ತಾತ್ಕಾಲಿಕ ರಸ್ತೆ ಕುಸಿದಿರುವುದು

ನಗರದಿಂದ ಹೊರಗೆ ಹೋಗುವವರಿಗೆ ಪರ್ಯಾಯ ಮಾರ್ಗ ಕಲ್ಪಿಸದೆ ಕಣ್ಣು ಮುಚ್ಚಿಕೊಂಡು ಸೇತುವೆ ಕಿತ್ತುಹಾಕಿ ಸಂಪರ್ಕ ಕಡಿತಗೊಳಿಸಿರುವುದು ಜನರ ಆಕ್ರೋಶವನ್ನು ಹೆಚ್ಚಿಸಿದೆ.

ತುಮಕೂರು ಅಮಾನಿಕೆರೆ ಕೋಡಿ ಬಳಿ ಸೇತುವೆ ನಿರ್ಮಾಣ ಸ್ಥಳದಲ್ಲಿ ನಿಂತಿರುವ ನೀರು

ಕೆಲಸ ಸ್ಥಗಿತ

ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಿಸುತ್ತಿದ್ದ ಜಾಗದಲ್ಲಿ ಮಳೆ ನೀರು ತುಂಬಿಕೊಂಡಿದ್ದು ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಂಡಿರುವುದು ಗುರುವಾರ ಕಂಡು ಬಂತು. ಮಳೆಗಾಲದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಮುನ್ನೆಚ್ಚರಿಕೆ ವಹಿಸದಿರುವುದು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಈ ಸಮಯದಲ್ಲಿ ಕಾಮಗಾರಿ ಆರಂಭಿಸಿದ್ದರೆ ಸಮಸ್ಯೆ ಎದುರಾಗಲಿದೆ ಎಂಬ ವಿಚಾರ ತಿಳಿದಿದ್ದರೂ ಏಕೆ ಅವಕಾಶ ಮಾಡಿಕೊಡಲಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲೇ ಮಳೆಗಾಲ ಕೊನೆಗೊಂಡಿತ್ತು. ಆ ಸಮಯದಲ್ಲೇ ಕೆಲಸ ಆರಂಭಿಸಿದರೆ ಈ ಹೊತ್ತಿಗಾಗಲೇ ಕೆಲಸ ಮುಗಿಸಬಹುದಿತ್ತು. ಇಲ್ಲವೆ ಈ ವರ್ಷದ ಮಳೆಗಾಲ ಮುಗಿದ ನಂತರವಾದರೂ ಕೆಲಸ ಆರಂಭಿಸಬಹುದಿತ್ತು. ಅದು ಬಿಟ್ಟು ಮಳೆಗಾಲವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಜನರು ಕೇಳುವ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರ ಇಲ್ಲವಾಗಿದೆ. ಮಳೆಗಾಲದಲ್ಲಿ ಕೆರೆ ತುಂಬಿ ಕೋಡಿ ಹರಿದರೆ ಸೇತುವೆ ನಿರ್ಮಾಣದ ಜಾಗದಲ್ಲಿ ನೀರು ತುಂಬಿಕೊಳ್ಳುತ್ತದೆ. ಕೋಡಿ ನೀರು ಹರಿದು ಹೋಗಲು ಪರ್ಯಾಯ ಮಾರ್ಗ ಕಲ್ಪಿಸಲು ಅಲ್ಲಿ ಅವಕಾಶವೇ ಇಲ್ಲ. ಇಕ್ಕಟ್ಟಿನ ಜಾಗ ಪರಿಸ್ಥಿತಿಯಲ್ಲಿ ಸೇತುವೆ ನಿರ್ಮಾಣ ಮಾಡಬೇಕಾಗುತ್ತದೆ. ಸಮಸ್ಯೆಯ ಅರಿವಿದ್ದರೂ ಜಿಲ್ಲಾ ಆಡಳಿತ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದೆ.

ಮನೆಗಳಿಗೆ ನೀರು ನುಗ್ಗಿರುವುದು

ಮನೆಗೆ ನುಗ್ಗಿದ ನೀರು

ಸೇತುವೆ ನಿರ್ಮಾಣ ಸ್ಥಳದಲ್ಲಿ ರಸ್ತೆಯ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಕೆರೆ ಏರಿಯ ಪಕ್ಕದಲ್ಲಿ ನಿರ್ಮಿಸಿರುವ ಕಾಲುವೆ ನೀರು ಇಲ್ಲಿಗೆ ಬಂದು ಸೇರುತ್ತದೆ. ಬುಧವಾರ ರಾತ್ರಿ ಸುರಿದ ಮಳೆಯ ನೀರು ಹರಿದು ಹೋಗಲು ಸಾಧ್ಯವಾಗದೆ ಅಕ್ಕಪಕ್ಕದ ಬಡಾವಣೆಗಳ ಮನೆಗಳಿಗೆ ನುಗ್ಗಿದೆ. ವಾಷಿಂಗ್ ಮಷಿನ್ ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಗೃಹೋಪಯೋಗಿ ಸಾಮಗ್ರಿಗಳು ಹಾಳಾಗಿದ್ದು ಜಿಲ್ಲಾ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.