ADVERTISEMENT

ಗ್ರಂಥಾಲಯದಲ್ಲಿ ಕೌಶಲ ತರಬೇತಿ ಕೇಂದ್ರ

ಗ್ರಂಥಾಲಯದ ಖಾಲಿ ಮಹಡಿ ಪರಿಶೀಲಿಸಿದ ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:09 IST
Last Updated 11 ಜುಲೈ 2024, 6:09 IST
<div class="paragraphs"><p>ತುಮಕೂರು ಕೇಂದ್ರ ಗ್ರಂಥಾಲಯಕ್ಕೆ ಬುಧವಾರ&nbsp;ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌,</p></div>

ತುಮಕೂರು ಕೇಂದ್ರ ಗ್ರಂಥಾಲಯಕ್ಕೆ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌,

   

ತುಮಕೂರು: ನಗರ ಕೇಂದ್ರ ಗ್ರಂಥಾಲಯದಲ್ಲಿ ಕೌಶಲಾಭಿವೃದ್ಧಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಗ್ರಂಥಾಲಯಕ್ಕೆ ಬುಧವಾರ ಭೇಟಿ ನೀಡಿ ಕಟ್ಟಡದಲ್ಲಿ ಖಾಲಿ ಉಳಿದಿರುವ ಎರಡು ಮತ್ತು ಮೂರನೇ ಮಹಡಿ ಪರಿಶೀಲಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿ, ‘ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ತಂತ್ರಜ್ಞಾನ, ಕೌಶಲಾಧಾರಿತ ತರಬೇತಿ ನೀಡಲಾಗುತ್ತದೆ. ಉದ್ಯಮಶೀಲತೆ ಹೆಚ್ಚಿಸುವ ಗುರಿ ಇದೆ. ಉದ್ಯೋಗ ಅವಕಾಶ ಕಲ್ಪಿಸುವುದು, ಯುವಕರನ್ನು ಉದ್ಯೋಗಕ್ಕೆ ಅಣಿಗೊಳಿಸಲು ತರಬೇತಿ ಕೇಂದ್ರ ಆರಂಭಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು’ ಎಂದರು.

ADVERTISEMENT

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಹಲವು ಕಡೆ ಇದರ ಅನುಷ್ಠಾನ ಸ್ವಲ್ಪ ಕುಂಠಿತವಾಗಿದೆ. ಕುಡಿಯುವ ನೀರಿನ ಘಟಕಗಳಿಗಾಗಿ ಮುಂದಿನ ದಿನಗಳಲ್ಲಿ ಒಂದು ನೀಲನಕ್ಷೆ ತಯಾರಿಸಲಾಗುವುದು ಎಂದು ಹೇಳಿದರು.

ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ 7 ಜನ ಮೃತಪಟ್ಟ ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಈಚೆಗೆ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಜತೆ ನಡೆದ ಸಭೆಯಲ್ಲೂ ಮುಖ್ಯಮಂತ್ರಿ ಈ ಬಗ್ಗೆ ಚರ್ಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನೆಲದ ಮೇಲೆ ಕೂರುತ್ತೇವೆ: ಓದುಗರ ಸಂಖ್ಯೆ ಹೆಚ್ಚಾಗಿದ್ದು, ಗ್ರಂಥಾಲಯದ ಎರಡು ಮಹಡಿಗಳು ಸಾಲುತ್ತಿಲ್ಲ. ಪೊಲೀಸ್‌ ನೇಮಕಾತಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಕುಳಿತುಕೊಳ್ಳಲು ಆಸನಗಳು ಸಿಗುವುದಿಲ್ಲ. ನೆಲದ ಮೇಲೆ ಕೂತು ಓದುತ್ತೇವೆ. ಕಟ್ಟಡದ ಮತ್ತೊಂದು ಮಹಡಿಯನ್ನು ಓದುಗರಿಗೆ ಮೀಸಲಿಡಬೇಕು’ ಎಂದು ಅಭ್ಯಾಸ ನಡೆಸುತ್ತಿದ್ದ ಯುವಕರು ಸಚಿವರನ್ನು ಒತ್ತಾಯಿಸಿದರು.

‘ಖಾಲಿ ಮಹಡಿಗಳಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜತೆ ಮಾತನಾಡಿ ಒಂದು ನಿರ್ಧಾರಕ್ಕೆ ಬರಲಾಗುವುದು’ ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಜಿ.ಪಂ ಸಿಇಒ ಜಿ.ಪ್ರಭು, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ.ದರ್ಶನ್‌, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.