ತುಮಕೂರು: ನಗರ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ನಿಷೇಧಿಸಲು ಜಿಲ್ಲಾ ಆಡಳಿತ ಮುಂದಾಗಿದೆ. ಮಹಾನಗರ ಪಾಲಿಕೆಯಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಿ ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಪರವಾನಗಿ ನೀಡುವ ಬಗ್ಗೆ ಚರ್ಚಿಸಲಾಗಿದೆ.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಧೂಮಪಾನ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರು. ಎಲ್ಲೆಡೆ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್, ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿದೇಶಿ ಸಿಗರೇಟ್ ಮಾರಾಟ ಮಾಡದಂತೆ ಕ್ರಮಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಎಲ್‍ಇಡಿ ವಾಲ್ ಹಾಗೂ ಸಿಗ್ನಲ್‍ಗಳಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ, ‘ಕೋಟ್ಪಾ’ ನಿಯಮಗಳ ಬಗ್ಗೆ ಪ್ರಚಾರ ಮಾಡಬೇಕು ಎಂದರು.
ಆರೋಗ್ಯ, ಶಿಕ್ಷಣ, ಪೊಲೀಸ್, ಸಾರಿಗೆ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡುತ್ತಿವೆ. ಕಾರ್ಮಿಕ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ, ತೋಟಗಾರಿಕೆ, ಅಗ್ನಿಶಾಮಕ ದಳ, ಆಹಾರ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲು ಅಧಿಕಾರವಿದೆ. ಅಂತಹ ಇಲಾಖೆಗಳು ಕೂಡಲೇ ಕಾರ್ಯಪ್ರವೃತ್ತರಾಗಿ ತಂಬಾಕು ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ರಾಮೇಗೌಡ, ‘ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ 100 ಶಾಲೆಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಏರ್ಪಡಿಸಲು ಗುರಿ ಹೊಂದಿದ್ದು, ಅದರಲ್ಲಿ 84 ಶಾಲೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ’ ಎಂದರು.
ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ರವಿಪ್ರಕಾಶ್, ‘ಕೋಟ್ಪಾ’ ಉಲ್ಲಂಘನೆಯಡಿ ಕಳೆದ ಏಪ್ರಿಲ್‌ನಿಂದ ನವೆಂಬರ್ ವರೆಗೆ ಆರೋಗ್ಯ ಇಲಾಖೆ 139 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ 1,528 ಪ್ರಕರಣ ದಾಖಲಿಸಿಕೊಂಡು ₹1.55 ಲಕ್ಷ ದಂಡ, ಪೊಲೀಸರು 907 ಪ್ರಕರಣಗಳಲ್ಲಿ ₹1.8 ಲಕ್ಷ ದಂಡ ವಸೂಲಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
ನಗರ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್, ಅಬಕಾರಿ ನಿರೀಕ್ಷಕ ನವೀನ್, ಪಾಲಿಕೆ ಆರೋಗ್ಯಾಧಿಕಾರಿ ಮದಕರಿ ನಾಯಕ, ಡಿವೈಪಿಸಿ ರಂಗಧಾಮಪ್ಪ, ಮಧುಗಿರಿ ಡಿವೈಪಿಸಿ ಪುಷ್ಪವಲ್ಲಿ, ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಉಪನಿರ್ದೇಶಕ ಗಂಗಾಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಂಜಿನಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.