ADVERTISEMENT

ತುಮಕೂರು | ಹೆತ್ತವರಿಗೆ ಬೇಡವಾದ ಕಂದಮ್ಮಗಳು!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 7:03 IST
Last Updated 4 ಮಾರ್ಚ್ 2024, 7:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತುಮಕೂರು: ಒಂಬತ್ತು ತಿಂಗಳು ಹೊತ್ತು, ಹೆತ್ತ ತಾಯಂದಿರು ಹೆರಿಗೆ ನಂತರ ತಮಗೆ ಮಕ್ಕಳು ಬೇಡ ಎನ್ನುತ್ತಿದ್ದಾರೆ. ತಾಯಿಯ ಪ್ರೀತಿ, ಆರೈಕೆ ಮತ್ತು ತಂದೆಯ ಆಶ್ರಯದಲ್ಲಿ ಬೆಳೆಯಬೇಕಿದ್ದ ಮಕ್ಕಳು ಅಂಬೆಗಾಲಿಡುವ ಮುನ್ನವೇ ಅನಾಥರಾಗುತ್ತಿದ್ದಾರೆ!

ಜಿಲ್ಲೆಯಲ್ಲಿ ಕಳೆದ 6 ವರ್ಷಗಳಲ್ಲಿ 129 ಮಕ್ಕಳನ್ನು ಪೋಷಕರು ತಮಗೆ ಬೇಡವೆಂದು ದೂಡಿದ್ದಾರೆ. ಆ ಮಕ್ಕಳು ಮಕ್ಕಳ ರಕ್ಷಣಾಧಿಕಾರಿಗಳ ಕೈ ಸೇರಿದ್ದು, ಜಿಲ್ಲೆಯ ವಿವಿಧ ದಯಾ ಭವನಗಳಲ್ಲಿ ಆಶ್ರಯ ಪಡೆದಿವೆ. ಹೆರಿಗೆಯಾದ ನಂತರ ಪೋಷಕರೇ ನವಜಾತ ಶಿಶುಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ನೀಡುತ್ತಿದ್ದಾರೆ.

ADVERTISEMENT

ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾದ ನಂತರ ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ, ವೈದ್ಯರ ಮುಖಾಂತರ ಮಕ್ಕಳ ರಕ್ಷಣಾ ಘಟಕವನ್ನು ತಾಯಂದಿರು ಸಂಪರ್ಕಿಸುತ್ತಿದ್ದಾರೆ. ಮಗುವನ್ನು ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ. ಪೋಕ್ಸೊ ಪ್ರಕರಣ, ಮದುವೆಗೂ ಮುನ್ನವೇ ಸಹ ಜೀವನ ನಡೆಸುತ್ತಿರುವ ಯುವತಿಯರು, ವಿಚ್ಛೇದಿತ ಮಹಿಳೆಯರು ಹೆರಿಗೆಯ ನಂತರದ ನೋಡಿಕೊಳ್ಳಲಾಗದೆ, ಸಮಾಜಕ್ಕೆ ಅಂಜಿ ತಮ್ಮ ರಕ್ತ ಹಂಚಿಕೊಂಡು ಹುಟ್ಟಿದ ಮಗುವನ್ನು ದೂರ ಮಾಡಿಕೊಳ್ಳುತ್ತಿದ್ದಾರೆ.

ಅಧಿಕಾರಿಗಳು ಪೋಷಕರಿಂದ ಮಕ್ಕಳನ್ನು ಪಡೆದು 2 ತಿಂಗಳ ವರೆಗೆ ಹೆತ್ತವರಿಗಾಗಿ ಕಾದು ನೋಡುತ್ತಾರೆ. ಪೋಷಕರ ಮನವೊಲಿಸಲು ಸಮಾಲೋಚನೆ ನಡೆಸುತ್ತಾರೆ. ತಮ್ಮ ಮಕ್ಕಳನ್ನು ವಾಪಸ್‌ ಪಡೆಯಲು ಒಪ್ಪದೇ ಇದ್ದಾಗ ಅನಿವಾರ್ಯವಾಗಿ ಬೇರೆಯವರಿಗೆ ದತ್ತು ನೀಡುತ್ತಾರೆ. ದತ್ತು ಸ್ವೀಕಾರ ಕೇಂದ್ರದಲ್ಲಿ ಮಕ್ಕಳನ್ನು ದತ್ತು ಪಡೆಯಲು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಿದವರಲ್ಲಿ ಅರ್ಹರನ್ನು ಪರಿಗಣಿಸಿ, ಎಲ್ಲ ಮಾನದಂಡಗಳನ್ನು ಅನುಸರಿಸಿದ ನಂತರ ಮಕ್ಕಳನ್ನು ಹಸ್ತಾಂತರಿಸುತ್ತಿದ್ದಾರೆ.

2018–19ನೇ ಸಾಲಿನಲ್ಲಿ ಒಟ್ಟು 35 ಶಿಶುಗಳನ್ನು ಮಕ್ಕಳ ರಕ್ಷಣಾಧಿಕಾರಿಗಳು ರಕ್ಷಿಸಿದ್ದರು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಗಂಡು–ಹೆಣ್ಣು ಎಂದು ವ್ಯತ್ಯಾಸ ಇಲ್ಲದೆ ಪೋಷಕರೇ ತಮ್ಮ ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದ್ದಾರೆ.

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಮಮತೆಯ ತೊಟ್ಟಿಲು’ ಇಟ್ಟಿದ್ದು, ಹೆತ್ತವರು ತಮಗೆ ಮಕ್ಕಳು ಬೇಡ ಎಂದರೆ ಆ ತೊಟ್ಟಿಲಲ್ಲಿ ಹಾಕಿ ಹೋಗಲು ಅವಕಾಶ ಕಲ್ಪಿಸಲಾಗಿದೆ. 2022–23ನೇ ಸಾಲಿನಲ್ಲಿ ಕುಣಿಗಲ್‌ ತಾಲ್ಲೂಕಿನ ಎರಡು ಶಿಶುಗಳನ್ನು ‘ಮಮತೆಯ ತೊಟ್ಟಿಲಿಗೆ’ ಹಾಕಿದ್ದರು. ದಯಾ ಭವನದಲ್ಲಿ ಆ ಮಕ್ಕಳ ಪಾಲನೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.