ADVERTISEMENT

ಗುಂಪುಗಳ ಕಾದಾಟಕ್ಕೆ ದಾಳವಾದ ಅಂಬೇಡ್ಕರ್‌, ಕಂಪೇಗೌಡ

ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ನಿಂದನೆ, ಆಕ್ಷೇಪ: ದೂರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 6:00 IST
Last Updated 15 ಅಕ್ಟೋಬರ್ 2024, 6:00 IST
ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ಮುಂದೆ ದಲಿತ ಮುಖಂಡರೊಂದಿಗೆ ಪಿಎಸ್ಐ ಶಮಂತ್ ಗೌಡ ವಾಗ್ವಾದ ನಡೆಸಿದರು
ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ಮುಂದೆ ದಲಿತ ಮುಖಂಡರೊಂದಿಗೆ ಪಿಎಸ್ಐ ಶಮಂತ್ ಗೌಡ ವಾಗ್ವಾದ ನಡೆಸಿದರು    

ಕುಣಿಗಲ್: ತಾಲ್ಲೂಕಿನ ಅಮೃತೂರಿನಲ್ಲಿ ಅಂಬೇಡ್ಕರ್‌ ಮತ್ತು ನಾಡಪ್ರಭು ಕೆಂಪೇಗೌಡ ಪರ ಎರಡು ಗುಂಪುಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನದ ಸಂದೇಶ ಹರಿದಾಡಿ ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯ ಠಾಣೆ ಮೆಟ್ಟಲೇರಿತ್ತು. ಸಿಪಿಐ ಮಾದ್ಯಾನಾಯಕ್ ಮಧ್ಯ ಪ್ರವೇಶ ಮಾಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆ.

ಅಮೃತೂರಿನಲ್ಲಿ ಅಂಬೇಡ್ಕರ್ ಯುವಕ ಸಂಘ ಮತ್ತು ಕೆಂಪೇಗೌಡ ಯುವಕರ ಸಂಘದಿಂದ ಗಣೇಶೋತ್ಸವ ನಡೆದಿತ್ತು. ಎರಡೂ ಗುಂಪಿನ ಯುವಕರು ತಮ್ಮ ನಾಯಕರೇ ಹೆಚ್ಚು ಎಂಬಂತೆ ಬಿಂಬಿಸಿ ದೃಶ್ಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಈ ವಿಚಾರವಾಗಿ ದಲಿತ ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿ ಒಕ್ಕಲಿಗ ಯುವಕರನ್ನು ಪ್ರಶ್ನೆ ಮಾಡಿತ್ತು. ಇದು ವಾಗ್ವಾದಕ್ಕೆ ಕಾರಣವಾಗಿ ದಲಿತ ಮುಖಂಡರು 13 ಮಂದಿ ಒಕ್ಕಲಿಗ ಯುವಕರ ಮೇಲೆ ಸೋಮವಾರ ಅಮೃತೂರು ಠಾಣೆಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು. ಪಿಎಸ್ಐ ಶಮಂತ್ ಗೌಡ ದೂರಿಗೆ ಸ್ಪಂದಿಸಿಲ್ಲ ಎಂದು ಠಾಣೆ ಮುಂದೆ ಪ್ರತಿಭಟನೆಯೂ ನಡೆಸಿದ್ದರು.

ADVERTISEMENT

ಒಕ್ಕಲಿಗ ಮುಖಂಡರು ಕೂಡ 5 ಮಂದಿ ದಲಿತ ಯುವಕರ ಮೇಲೆ ದೂರು ದಾಖಲಿಸಿದ್ದರು. ಠಾಣೆ ಮುಂದೆ ಎರಡೂ ಬಣದವರು ಸೇರಿ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಮಯದಲ್ಲಿ ಸಿಪಿಐ ಮಾದ್ಯಾ ನಾಯಕ್, ಎರಡೂ ಗುಂಪಿನ ಮುಖಂಡರೊಂದಿಗೆ ಸಭೆ ನಡೆಸಿದರು. ಅಂಬೇಡ್ಕರ್ ಮತ್ತು ಕೆಂಪೇಗೌಡ ಇಬ್ಬರೂ ಮಾನವನ ಒಳಿತಿಗಾಗಿ ಶ್ರಮಿಸಿದ ಮಹಾನ್ ಪುರುಷರು. ಸ್ವಾರ್ಥಕ್ಕಾಗಿ ಗುಂಪುಗಾರಿಕೆ ಮಾಡಿ ಶಾಂತಿ ಭಂಗ ಉಂಟು ಮಾಡಿದರೆ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿ ವಿವಾದ ಬಗೆಹರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.