ಪಾವಗಡ: ತಾಲ್ಲೂಕಿನ ರಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಲಾರ್ ಪಾರ್ಕ್ ವಿಸ್ತರಣೆಗಾಗಿ ಜಮೀನು ನೀಡಿದ ರೈತರಿಗೆ ಎಕರೆಗೆ ₹25,200 ಬಾಡಿಗೆ ನಿಗಡಿಪಡಿಸಲಾಯಿತು.
ತಾಲ್ಲೂಕಿನ ರಾಪ್ಟೆ ಗ್ರಾಮದಲ್ಲಿ ಬುಧವಾರ ನಡೆದ ಬಾಡಿಗೆ ನಿಗದಿ ಸಭೆಯಲ್ಲಿ, ರೈತರು ಪ್ರತಿ ಎಕರೆಗೆ ₹30 ಸಾವಿರದಿಂದ ₹35 ಸಾವಿರ ನಿಗಡಿಪಡಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಯನ್ನು ಒಳಗೊಂಡ ಅಧಿಕಾರಿಗಳ ತಂಡ ಅಂತಿಮವಾಗಿ ಪ್ರತಿ ಎಕರೆಗೆ ವಾರ್ಷಿಕ ₹25,200 ನಿಗದಿಪಡಿಸಿತು.
ತಿರುಮಣಿ, ವಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ 13 ಸಾವಿರ ಎಕರೆ ಜಮೀನಿನ ಪೈಕಿ 10 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲಾಗಿದೆ. 2,050 ಮೆಗಾ ವಾಟ್ ಉತ್ಪಾದನೆಯಾಗುತ್ತಿದೆ.
ರಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೇನಹಳ್ಳಿ, ನಾಗೇನಹಳ್ಳಿ ತಾಂಡ, ರೆಡ್ಡಿವಾರ್ಲಹಳ್ಳಿ, ಅಪ್ಪಾಜಿಹಳ್ಳಿ, ಬುಗಡೂರು, ಹುಸೇನ್ ಪುರ ಗ್ರಾಮಗಳ ರೈತರು ಸೋಲಾರ್ ಪಾರ್ಕ್ ವಿಸ್ತರಣೆಗೆ ಒಲವು ತೋರಿದ್ದರು. ಬಹುತೇಕಲ ರೈತರು ತಮ್ಮ ಜಮೀನುಗಳನ್ನು ಸೋಲಾರ್ ಪಾರ್ಕ್‌ಗೆ ನೀಡಲು ಒಪ್ಪಿಗೆ ಸೂಚಿಸಿ ದಾಖಲೆಗಳನ್ನು ನೀಡಿದ್ದರು.
ಬುಧವಾರ ಬಾಡಿಗೆ ನಿಗದಿ ಸಭೆ ನಡೆಸಿ ಈಗಾಗಲೆ ತಿರುಮಣಿ ಸೋಲಾರ್ ಪಾರ್ಕ್‌ಗೆ ಜಮೀನು ನೀಡಿದ ರೈತರಿಗೆ ಪ್ರಸ್ತುತ ನೀಡುತ್ತಿರುವ ಬಾಡಿಗೆಯನ್ನು ಇಲ್ಲಿನ ರೈತರಿಗೂ ನಿಗದಿಪಡಿಸಲಾಯಿತು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ರಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ವಿಸ್ತರಣೆಯಾದಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಜನಪ್ರಿಯತೆ ಗಳಿಸಲಿದೆ ಎಂದರು.
ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅನೇಕ ರೈತರು ದೂರು ನೀಡುತ್ತಿದ್ದಾರೆ. ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ ಫೋನ್ ಇದ್ದು ಬೆಳೆ ಸಮೀಕ್ಷೆಯನ್ನು ರೈತರೆ ಮಾಡಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದರು.
ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ಪ್ರಪಂಚದ ಭೂಪಟದಲ್ಲಿ ಪಾವಗಡ ಸೋಲಾರ್ ಪಾರ್ಕ್ ಅನ್ನು ಗುರುತಿಸುವಷ್ಟು ಮಟ್ಟಿಗೆ ಹೆಸರು ಪಡೆದಿದೆ. ತಾಲ್ಲೂಕಿನ ಅಂದಾನಪುರ ಸೇರಿದಂತೆ ಹಲವಾರು ಗ್ರಾಮಗಳ ರೈತರು ಸೋಲಾರ್ ಪಾರ್ಕ್‌ಗೆ ಜಮೀನು ನೀಡಲು ಮುಂದಾಗಿದ್ದಾರೆ ಎಂದರು.
ಮಾಜಿ ಸಚಿವ ವೆಂಕಟರಮಣಪ್ಪ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ, ಕೆಎಸ್‌ಪಿಡಿಸಿಎಲ್ ಸಿ.ಇ.ಒ ಅಮರ್ ನಾಥ್, ತಹಶೀಲ್ದಾರ್ ವರದರಾಜು, ತಾಲ್ಲೂಕು ಪಂಚಾಯಿತಿ ಇ.ಒ ಜಾನಕಿ ರಾಮ್, ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆರ್.ಪಿ. ಸಂಬಸದಾಶಿವ ರೆಡ್ಡಿ, ಪದಾಧಿಕಾರಿಗಳು, ರೈತ ಮುಖಂಡರು ಎಸ್.ಕೆ. ರೆಡ್ಡಿ, ನಾನಿ ನಾಗೇಂದ್ರರಾವ್, ಕೆ.ಎಂ. ಶ್ರೀನಿವಾಸುಲು, ನಾಗರಾಜು, ಶಿವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.