ADVERTISEMENT

ಮಧುಗಿರಿಯಲ್ಲೂ ಸೋಲಾರ್ ಪಾರ್ಕ್: 500 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:15 IST
Last Updated 2 ಜುಲೈ 2024, 4:15 IST
ಸೋಲಾರ್ ಪಾರ್ಕ್‌
ಸೋಲಾರ್ ಪಾರ್ಕ್‌   

ತುಮಕೂರು: ಪಾವಗಡ ತಾಲ್ಲೂಕಿನಲ್ಲಿ ನಿರ್ಮಾಣ ಮಾಡಿರುವ ರೀತಿಯಲ್ಲೇ ಮಧುಗಿರಿ ತಾಲ್ಲೂಕಿನಲ್ಲೂ ಸೌರ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ‘ಸೋಲಾರ್ ಪಾರ್ಕ್’ ನಿರ್ಮಾಣ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಇಲ್ಲಿ ಸೋಮವಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಧನ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಧುಗಿರಿ ತಾಲ್ಲೂಕಿನಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಯೊಂದಿಗೆ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಬಂಡವಾಳ ತೊಡಗಿಸಲಿದೆ. ಆರಂಭಿಕ ಹಂತದಲ್ಲಿ 500 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ನಾಲ್ಕು ಎಕರೆ ಜಮೀನು ಅಗತ್ಯವಿದೆ. 500 ಮೆಗಾವಾಟ್ ಉತ್ಪಾದನೆ ಮಾಡಲು 2,000–2,500 ಎಕರೆ ಜಮೀನು ಬೇಕಾಗುತ್ತದೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸರ್ಕಾರದ ಜಮೀನು ನೀಡಿದರೆ ಅದಕ್ಕೂ ಸಂಸ್ಥೆಯವರು ಬಾಡಿಗೆ ನೀಡಬೇಕಾಗುತ್ತದೆ. ಈ ಹಣವನ್ನು ಜಿಲ್ಲಾಧಿಕಾರಿ ಖಾತೆಯಲ್ಲಿ ಠೇವಣಿ ಇಟ್ಟು, ಆ ಭಾಗದ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಪಾವಗಡ ತಾಲ್ಲೂಕಿನಲ್ಲೂ ಸೋಲಾರ್ ಪಾರ್ಕ್‌ ವಿಸ್ತರಣೆಗೆ ಪ್ರಯತ್ನ ಮುಂದುವರಿದಿದೆ. ಇನ್ನೂ 10 ಸಾವಿರ ಎಕರೆ ಜಮೀನು ಕೊಡಲು ಅಲ್ಲಿನ ರೈತರು ಮುಂದೆ ಬಂದಿದ್ದಾರೆ ಎಂದರು.

730 ಮೆಗಾವಾಟ್‌ ಉತ್ಪಾದನೆ: ‘ಕೃಷಿಕರಿಗೆ ಉಚಿತವಾಗಿ ವಿದ್ಯುತ್ ಕೊಡುವ ಉದ್ದೇಶದಿಂದ ‘ಕುಸುಮ್‌–ಸಿ’ ಯೋಜನೆ ಜಾರಿಗೆ ತರಲಾಗಿದ್ದು, ರಾಜ್ಯದಲ್ಲಿ 730 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

ಕುಸುಮ್‌–ಸಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ವಿದ್ಯುತ್ ಉತ್ಪಾದನೆಗೆ 3,653 ಎಕರೆ ಭೂಮಿಯ ಅಗತ್ಯವಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು 239 ಮೆ.ವಾ ವಿದ್ಯುತ್‌ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ‘ರೈತರಿಗೆ ಬೇಕಾದ ವಿದ್ಯುತ್ ಸ್ಥಳೀಯವಾಗಿ ಉತ್ಪಾದನೆಯಾಗಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಉಪಸ್ಥಾವರಗಳ ವ್ಯಾಪ್ತಿಯಲ್ಲಿ ಸೋಲಾರ್ ಘಟಕ ಮಾಡಲಾಗುತ್ತಿದೆ. ನೀರಾವರಿ ಪಂಪ್‌ಸೆಟ್‌ ಇರುವ ಕಡೆ ಮಾತ್ರ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 27 ಕಡೆ, ಎರಡನೇ ಹಂತದಲ್ಲಿ 12 ಕಡೆ ಅನುಷ್ಠಾನಕ್ಕೆ ತರಲಾಗುವುದು’ ಎಂದು ಮಾಹಿತಿ ನೀಡಿದರು.

ಡೀಮ್ಡ್ ಅರಣ್ಯ ಪ್ರದೇಶ ಇರುವ ಕಡೆ ಯೋಜನೆ ಅನುಷ್ಠಾನಕ್ಕೆ ಸಮಸ್ಯೆಯಾಗುತ್ತಿದೆ. ಈಗಾಗಲೇ 575 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಗೃಹ ಸಚಿವ ಜಿ.ಪರಮೇಶ್ವರ, ಶಾಸಕ ಕೆ.ಷಡಕ್ಷರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಸ್ಕಾಂ ವ್ಯವಸ್ಥಾಪಕ ಮಹಾಂತೇಶ ಬೀಳಗಿ, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಭಾಗವಹಿಸಿದ್ದರು.

ಕೆಪಿಟಿಸಿಎಲ್‌ಗೆ ಛಳಿ ಬಿಡಿಸಿದ ಸಚಿವ ತುಮಕೂರು: ‘ನೀವೆಲ್ಲ ಏನ್‌ ಕತ್ತೆ ಕರೆಯುತ್ತೀರಾ? ಯೂಸ್‌ಲೆಸ್‌ ಮೊದಲು ನಿಮ್ಮ ತಲೆ ತೆಗೆಯಬೇಕು’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಕೆಪಿಟಿಸಿಎಲ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಒಂದು ವಿದ್ಯುತ್ ಉಪಸ್ಥಾವರ ನಿರ್ಮಿಸಲು ಆರು ವರ್ಷ ಬೇಕಾ? ಮಧುಗಿರಿ ಭಾಗದಲ್ಲಿ ಎಂಟು ತಿಂಗಳಲ್ಲಿ ಸಬ್‌ಸ್ಟೇಷನ್‌ ಮಾಡಿಸಿದ್ದೇನೆ. ಯಾಕಿದೀರಿ ನೀವೆಲ್ಲ’ ಎಂದು ಕಿಡಿಕಾರಿದರು ಎಂದು ಮೂಲಗಳು ತಿಳಿಸಿವೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅಧ್ಯಕ್ಷತೆಯಲ್ಲಿ ನಡೆದ ಕುಸುಮ್‌–ಸಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ ‘ಶಿರಾ ಭಾಗದಲ್ಲಿ ನಾಲ್ಕು ವಿದ್ಯುತ್‌ ಉಪಸ್ಥಾವರ ನಿರ್ಮಾಣ ಕಾಮಗಾರಿ ಕಳೆದ ಆರೇಳು ವರ್ಷಗಳಿಂದ ನಡೆಯುತ್ತಿದ್ದು ಈವರೆಗೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕಳೆದ ಒಂದು ವರ್ಷದಲ್ಲಿ ಹತ್ತು ಸಭೆ ಮಾಡಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಿರುವ ಉಪಸ್ಥಾವರ ಮತ್ತು ಟ್ರಾನ್ಸ್‌ ಫಾರ್ಮರ್‌ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಕೆಲಸ ಬೇಗ ಮುಗಿಯದಿದ್ದರೆ ಮುಂದಿನ ದಿನಗಳಲ್ಲಿ ಒಂದು ಟ್ರಾನ್ಸ್‌ಫಾರ್ಮರ್‌ ಕೂಡ ಉಳಿಯುವುದಿಲ್ಲ ಎಂದರು. ಈ ಸಮಯದಲ್ಲಿ ರಾಜಣ್ಣ ಅವರು ಕೆಪಿಟಿಸಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆ.ಜೆ.ಜಾರ್ಜ್‌ ‘ರಾಜಣ್ಣ ದಯವಿಟ್ಟು ವಿಷಯ ಬದಲಿಸಬೇಡಿ. ನಾನು ಎಲ್ಲ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುತ್ತೇನೆ. ನಿಮ್ಮ ಇಲಾಖೆಯ ಬಗ್ಗೆ ನಾನು ಚರ್ಚೆ ಮಾಡಿದರೆ ಹಲವು ಸಮಸ್ಯೆಗಳು ಹೊರ ಬರುತ್ತವೆ’ ಎಂದು ರಾಜಣ್ಣ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೆಲಸ ಮಾಡುವುದು ಅಧಿಕಾರಿಗಳ ಕರ್ತವ್ಯ. ನೀವೇಕೆ ನಿಮ್ಮ ತಲೆ ಮೇಲೆ ಹಾಕಿಕೊಳ್ಳುತ್ತೀರಿ. ಇನ್ನೂ ಹತ್ತು ವರ್ಷ ಬಿಟ್ಟು ಮಾಡಿಸಿ ನಮ್ಮದೇನು ತಕರಾರು ಇಲ್ಲ ಎಂದು’ ರಾಜಣ್ಣ ವ್ಯಂಗ್ಯವಾಗಿ ಜಾರ್ಜ್‌ ಅವರಿಗೆ ಕುಟುಕಿದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.