ADVERTISEMENT

ತುಮಕೂರು | ‘ಗಿನ್ನಿಸ್‌ ದಾಖಲೆ’ಗಾಗಿ ಕ್ರೀಡಾಂಗಣ ಹಾಳು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 18:29 IST
Last Updated 11 ಫೆಬ್ರುವರಿ 2024, 18:29 IST
ತುಮಕೂರು ಜಿಲ್ಲಾ ಕ್ರೀಡಾಂಗಣದ ಫುಟ್‌ಬಾಲ್‌ ಅಂಗಣದಲ್ಲಿ ‘ಮೊಳೆ’ ಹೊಡೆದಿರುವುದು
ತುಮಕೂರು ಜಿಲ್ಲಾ ಕ್ರೀಡಾಂಗಣದ ಫುಟ್‌ಬಾಲ್‌ ಅಂಗಣದಲ್ಲಿ ‘ಮೊಳೆ’ ಹೊಡೆದಿರುವುದು   

ತುಮಕೂರು: ಜಿಲ್ಲಾ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಂದ ವಿವಿಧ ಕಲಾಕೃತಿ ರಚಿಸಿ, ‘ಗಿನ್ನಿಸ್‌ ದಾಖಲೆ’ ಮಾಡಲು ಪ್ರಯತ್ನಿಸಿದ ಅಧಿಕಾರಿಗಳು ತಮ್ಮ ಕೆಲಸ ಮುಗಿದ ನಂತರ ಇತ್ತ ತಲೆ ಹಾಕಿಲ್ಲ. ಫುಟ್‌ಬಾಲ್‌ ಅಂಗಣದಲ್ಲಿ ‘ಮೊಳೆ’ ಗಳನ್ನು ಚುಚ್ಚಿದ್ದು, ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿಯಾಗಿದೆ.

ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿ ವತಿಯಿಂದ ಸುಮಾರು 1 ಲಕ್ಷ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ‘ತುಮಕೂರು’ ಎಂಬ ಕನ್ನಡ ಪದದ ಕಲಾಕೃತಿ ರಚಿಸಲಾಗಿತ್ತು. ಇದರ ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ 1.35 ಲಕ್ಷ ಬಾಟಲಿಗಳಲ್ಲಿ ‘ನಮ್ಮ ಸಂವಿಧಾನ’ ಎಂಬ ಕಲಾಕೃತಿ ರಚಿಸಿದ್ದರು. ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಫುಟ್‌ಬಾಲ್‌ ಅಂಗಣ ಬಳಸಿಕೊಂಡಿದ್ದರು.

ಎರಡೂ ಕಲಾಕೃತಿಗಳ ರಚನೆ, ಪ್ರದರ್ಶನದ ಸಮಯದಲ್ಲಿ ಕ್ರೀಡಾಂಗಣಕ್ಕೆ ಕ್ರೀಡಾಪಟುಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಕ್ರೀಡಾಪಟುಗಳು ರಸ್ತೆ, ಕ್ರೀಡಾಂಗಣದ ಪಾರ್ಕಿಂಗ್‌ ಸ್ಥಳದಲ್ಲಿ ಅಭ್ಯಾಸ ಮಾಡುತ್ತಿದ್ದರು. ಕಲಾಕೃತಿ ತೆರವಿನ ನಂತರ ಕ್ರೀಡಾಂಗಣದಲ್ಲಿ ಈ ಮೊದಲಿನಂತೆ ಮತ್ತೆ ಅಭ್ಯಾಸ ಶುರು ಮಾಡಿದ್ದಾರೆ.

ADVERTISEMENT

ಕಲಾಕೃತಿ ರಚನೆಗೆ ಮ್ಯಾಟ್‌ ಬಳಸಿದ್ದು, ಅದಕ್ಕೆ ಮೊಳೆಗಳನ್ನು ಹೊಡೆದಿದ್ದರು. ಕಲಾಕೃತಿ ತೆರವುಗೊಳಿಸುವಾಗ ಮೊಳೆಗಳನ್ನು ಅಂಗಣದಿಂದ ಹೊರ ತೆಗೆದಿಲ್ಲ. ಅಭ್ಯಾಸದ ಸಮಯದಲ್ಲಿ ಇದು ಕ್ರೀಡಾಪಟುಗಳ ಗಮನಕ್ಕೆ ಬಂದಿದ್ದು, ತಾವೇ ಮುಂದೆ ನಿಂತು ಮೊಳೆಗಳನ್ನು ತೆಗೆದಿದ್ದಾರೆ. ಇನ್ನೂ ಹಲವು ಮೊಳೆಗಳು ಫುಟ್‌ಬಾಲ್‌ ಅಂಗಣದಲ್ಲಿಯೇ ಉಳಿದಿದ್ದು, ಕ್ರೀಡಾಪಟುಗಳು ಆತಂಕದಲ್ಲಿಯೇ ಅಭ್ಯಾಸ ನಡೆಸುತ್ತಿದ್ದಾರೆ.

ಎರಡು ವಾರಗಳ ಕಾಲ ನೀರಿಲ್ಲದೆ ಫುಟ್‌ಬಾಲ್‌ ಅಂಗಣದ ಹಸಿರು ಹುಲ್ಲು ಸಂಪೂರ್ಣವಾಗಿ ಒಣಗಿ ಹೋಗಿದ್ದು, ಮತ್ತೆ ಮೊದಲಿನಂತೆ ಆಗಲು ಹಲವು ದಿನಗಳು ಬೇಕಾಗುತ್ತದೆ. ಕಲಾಕೃತಿ ರಚನೆಗೆ ಬಳಸಿದ್ದ ಬಾಟಲಿಗಳನ್ನು ಇನ್ನೂ ಕ್ರೀಡಾಂಗಣದ ಕಟ್ಟಡದಲ್ಲಿಯೇ ಸಂಗ್ರಹಿಸಿಟ್ಟಿದ್ದು, ತೆರವುಗೊಳಿಸಿಲ್ಲ. ಇದರಿಂದ ಕಟ್ಟಡದಲ್ಲಿ ಸ್ವಚ್ಛತೆ ಎಂಬುವುದು ಮರೀಚಿಕೆಯಾಗಿದ್ದು, ಕೊಳೆತು ನಾರುತ್ತಿದೆ.

ಕಲಾಕೃತಿ ರಚನೆ, ಪ್ರದರ್ಶನ, ಫೋಟೊಗಳಿಗೆ ಫೋಸು ನೀಡಲು ಆಸಕ್ತಿ ತೋರಿದ ಅಧಿಕಾರಿಗಳು ಕ್ರೀಡಾಂಗಣದ ಸ್ವಚ್ಛತೆಯ ವಿಷಯದಲ್ಲಿ ತುಂಬಾ ನಿರ್ಲಕ್ಷ್ಯ ವಹಿಸಿದ್ದಾರೆ. ಕಲಾಕೃತಿ ತೆರವುಗೊಳಿಸಿದ ನಂತರ ಇತ್ತ ಗಮನ ಹರಿಸಿಲ್ಲ. ‘ಫುಟ್‌ಬಾಲ್‌ ಅಂಗಣದಲ್ಲಿ ‘ಮೊಳೆಗಳಿವೆ ಎಚ್ಚರ’ ಎಂಬ ನಾಮಫಲಕ ಆದರೂ ಹಾಕಿಸಿ. ಇಲ್ಲದಿದ್ದರೆ ಕೂಡಲೇ ಮೊಳೆಗಳನ್ನು ತೆಗೆಸುವ ಕೆಲಸ ಮಾಡಿ’ ಎಂದು ಭಾನುವಾರ ಕ್ರೀಡಾಂಗಣಕ್ಕೆ ತಮ್ಮ ಮಕ್ಕಳನ್ನು ಕರೆ ತಂದಿದ್ದ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.

ಸಿಂಥೆಟಿಕ್‌ ಟ್ರ್ಯಾಕ್‌ ಯದ್ವಾತದ್ವ ಬಳಕೆ

ಕಲಾಕೃತಿ ರಚನೆಯ ಸಮಯದಲ್ಲಿ ಮ್ಯಾಟ್‌ ಪ್ಲಾಸ್ಟಿಕ್‌ ಬಾಟಲಿಗಳ ಸಾಗಾಟಕ್ಕೆ ಸಿಂಥೆಟಿಕ್‌ ಟ್ರ್ಯಾಕ್‌ ಬಳಸಲಾಗಿದೆ. ಕ್ರೀಡಾಂಗಣದ ಪ್ರಾರಂಭದಲ್ಲಿಯೇ ಸಿಂಥೆಟಿಕ್‌ ಟ್ರ್ಯಾಕ್‌ ಗುಣಮಟ್ಟದಿಂದ ಕೂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ರ್ಯಾಕ್‌ ಹಾಳಾಗುತ್ತಿದೆ.

‘ಸಿಂಥೆಟಿಕ್‌ ಟ್ರ್ಯಾಕ್‌ ಅನ್ನು ಯದ್ವಾತದ್ವ ಬಳಕೆ ಮಾಡಿದ್ದು ಕ್ರೀಡಾಪಟುಗಳ ಅಭ್ಯಾಸಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಅಧಿಕಾರಿಗಳು ಯಾವುದೇ ಮುಂದಾಲೋಚನೆ ಇಲ್ಲದೆ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಅನ್ಯ ಕಾರ್ಯಗಳಿಗೆ ಕ್ರೀಡಾಂಗಣ ಕೊಡಬಾರದು’ ಎಂದು ಹಿರಿಯ ಕ್ರೀಡಾಪಟುಯೊಬ್ಬರು ಒತ್ತಾಯಿಸಿದರು.

ಫುಟ್‌ಬಾಲ್‌ ಅಂಗಣದಲ್ಲಿ ಹೊಡೆದಿದ್ದ ಮೊಳೆಗಳನ್ನು ಕ್ರೀಡಾಪಟುಗಳು ತೆರವುಗೊಳಿಸಿದರು

ತುಮಕೂರು ಜಿಲ್ಲಾ ಕ್ರೀಡಾಂಗಣದ ಕಟ್ಟಡದಲ್ಲಿ ಬಾಟಲಿಗಳ ಸಂಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.