ADVERTISEMENT

ತುಮಕೂರು: ನಾಳೆಯಿಂದ ರಾಜ್ಯ ಮಟ್ಟದ ಅಥ್ಲೆಟಿಕ್ಸ್‌

25 ಕ್ರೀಡೆಗಳು ಆಯೋಜನೆ, 3 ಸಾವಿರ ಕ್ರೀಡಾಪಟುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:01 IST
Last Updated 6 ನವೆಂಬರ್ 2024, 5:01 IST
ತುಮಕೂರಿನಲ್ಲಿ ಮಂಗಳವಾರ ಅಥ್ಲೆಟಿಕ್ಸ್‌ ಕ್ರೀಡಾಕೂಟದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಬಾಲಗುರುಮೂರ್ತಿ, ಕ್ರೀಡಾಕೂಟದ ಸಂಚಾಲಕರಾದ ಬಸವರಾಜು, ಪ್ರಭಾಕರ್‌ ರೆಡ್ಡಿ, ಮಹಾಂತೇಶ್‌ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಮಂಗಳವಾರ ಅಥ್ಲೆಟಿಕ್ಸ್‌ ಕ್ರೀಡಾಕೂಟದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಬಾಲಗುರುಮೂರ್ತಿ, ಕ್ರೀಡಾಕೂಟದ ಸಂಚಾಲಕರಾದ ಬಸವರಾಜು, ಪ್ರಭಾಕರ್‌ ರೆಡ್ಡಿ, ಮಹಾಂತೇಶ್‌ ಉಪಸ್ಥಿತರಿದ್ದರು   

ತುಮಕೂರು: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ನ. 7ರಿಂದ 10ರ ವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳ ಸುಮಾರು 3 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನ. 7ರಂದು ಸಂಜೆ 4 ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತದೆ. ಮೊದಲ ದಿನ 1,500 ಮೀಟರ್‌ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ಉಳಿದ ಮೂರು ದಿನ ವಿವಿಧ ಸ್ಪರ್ಧೆಗಳು ನಡೆಯಲಿವೆ’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಬಾಲಗುರುಮೂರ್ತಿ ಇಲ್ಲಿ ಮಂಗಳವಾರ ತಿಳಿಸಿದರು.

ಕ್ರೀಡಾಕೂಟದ ನಿರ್ವಹಣೆಗೆ 170 ಜನರನ್ನು ನಿಯೋಜಿಸಲಾಗಿದೆ. 9ರಂದು ಗುಡ್ಡಗಾಡು ಓಟ ಸ್ಪರ್ಧೆ ಆಯೋಜಿಸಲಾಗಿದೆ. ಊರ್ಡಿಗೆರೆ ರಸ್ತೆಯ ಸಿದ್ಧಗಂಗಾ ವೃತ್ತದಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದ ವರೆಗೆ ಓಟ ಇರಲಿದೆ. ಬಾಲಕಿಯರು ಉಳಿದುಕೊಳ್ಳಲು ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ನಗರದ ವಿವಿಧ 6 ಕಾಲೇಜುಗಳಲ್ಲಿ ಬಾಲಕರಿಗೆ ಆಶ್ರಯ ಕಲ್ಪಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚರ್ಚಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ. ನಾಲ್ಕು ದಿನ ಮಕ್ಕಳ ಊಟಕ್ಕೆ ಸುಮಾರು ₹10 ಲಕ್ಷ ವೆಚ್ಚವಾಗಬಹುದು. ಇಲಾಖೆಯ ಅನುದಾನದ ಜತೆಗೆ ವಿವಿಧ ಸಂಸ್ಥೆಗಳಿಂದ ನೆರವು ಪಡೆಯಲಾಗಿದೆ. ಕ್ರೀಡಾಕೂಟದ ಸಮರ್ಪಕ ನಿರ್ವಹಣೆಗೆ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸ್ಥಾನ ಪಡೆಯಲಿದ್ದಾರೆ. ಪ್ರತಿ ಜಿಲ್ಲೆಯಿಂದ 80 ಜನ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇಲಾಖೆಯಿಂದ ಕ್ರೀಡಾಕೂಟದ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕ್ರೀಡಾಕೂಟದ ಸಂಚಾಲಕರಾದ ಬಸವರಾಜು, ಪ್ರಭಾಕರ್‌ ರೆಡ್ಡಿ, ಮಹಾಂತೇಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.