ADVERTISEMENT

ತುಮಕೂರು: ಶಿಕ್ಷಕರ ರಾಜ್ಯ ಮಟ್ಟದ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 3:06 IST
Last Updated 31 ಜನವರಿ 2024, 3:06 IST
ತುಮಕೂರಿನಲ್ಲಿ ಮಂಗಳವಾರ ಆರಂಭವಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಪಾಠೋಪಕರಣ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರು
ತುಮಕೂರಿನಲ್ಲಿ ಮಂಗಳವಾರ ಆರಂಭವಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಪಾಠೋಪಕರಣ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರು   

ತುಮಕೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗೆ ನಗರದ ಎಂಪ್ರೆಸ್‌ ಕಾಲೇಜಿನಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಜನಪದ ಗೀತೆ, ಆಶುಭಾಷಣ, ಪ್ರಬಂಧ, ಸ್ಥಳದಲ್ಲಿಯೇ ಪಾಠೋಪಕರಣ ತಯಾರಿಕೆ, ಚಿತ್ರ ಬಿಡಿಸುವುದು, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೀದರ್‌, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಿಂದ 490 ಮಂದಿ ಶಿಕ್ಷಕರು ಭಾಗವಹಿಸಿದ್ದರು.

ತರಗತಿಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದ ಶಿಕ್ಷಕರು ಮಕ್ಕಳಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ತೀವ್ರ ಪೈಪೋಟಿ ನೀಡಿದರು. ಮಕ್ಕಳ ಕಲಿಕೆ ಸುಲಭಗೊಳಿಸಲು, ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಪಾಠೋಪಕರಣಗಳನ್ನು ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಕ್ಷಕರು ತಮ್ಮ ವಿಭಿನ್ನ ಆಲೋಚನೆಗಳ ಮೂಲಕ ವಿವಿಧ ಮಾದರಿಗಳನ್ನು ತಯಾರಿಸಿ ಗಮನ ಸೆಳೆದರು. ಮಂಗಳವಾರ ಪ್ರಾಥಮಿಕ ಶಿಕ್ಷಕರ ಸ್ಪರ್ಧೆ ನಡೆದಿದ್ದು, ಬುಧವಾರ ಪ್ರೌಢಶಾಲಾ ಶಿಕ್ಷಕರಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ADVERTISEMENT

ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದ ಉಪನಿರ್ದೇಶಕ ಡಿ.ಹನುಮಂತರಾಯ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ‘ಶಿಕ್ಷಕರ ಕಲ್ಯಾಣ ನಿಧಿಯಲ್ಲಿನ ಹಣವನ್ನು ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಬಳಸಬೇಕು. ಗುರು ಭವನ ನಿರ್ಮಾಣ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ವಿನಿಯೋಗಿಸಬೇಕು’ ಎಂದು ತಿಳಿಸಿದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ, ‘ಮುಂದಿನ ತಿಂಗಳು ಧಾರವಾಡದಲ್ಲಿ ಮಕ್ಕಳ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಏರ್ಪಡಿಸಲಾಗಿದೆ. ಇದೇ ವೇಳೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಜಾರಿ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು’ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಯ್ಯ, ಡಯಟ್‌ ಪ್ರಾಂಶುಪಾಲ ಕೆ.ಮಂಜುನಾಥ್‌, ಬಿಇಒ ಸೂರ್ಯಕಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನರಸಿಂಹರಾಜು, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಶಿವಮೂರ್ತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್‌ ಮೊದಲಾದವರು ಪಾಲ್ಗೊಂಡಿದ್ದರು.

ತುಮಕೂರಿನಲ್ಲಿ ಮಂಗಳವಾರ ಆರಂಭವಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು
ಜನಪದ ಗೀತೆ ಸ್ಪರ್ಧೆಗೆ ಶಿಕ್ಷಕರು ತಯಾರಿ ನಡೆಸಿದರು

ವಿವಿಧ ಸ್ಪರ್ಧೆ ವಿಜೇತರು

ಪ್ರಾಥಮಿಕ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು ರಸಪ್ರಶ್ನೆ ಸ್ಪರ್ಧೆ (ಸಾಮಾನ್ಯ ಜ್ಞಾನ): ಮಹಾಂತೇಶ್‌ ಗುಂಡಪ್ಪ ಕಲಘಟಕರ (ಗದಗ) ಜಿ.ವಿಜಯಕುಮಾರ ನಾಯ್ಕ್‌ (ಚಿಕ್ಕಮಗಳೂರು) ಮಹೇಶ್‌ ಹಳೇಮನೆ (ವಿಜಯಪುರ). ವಿಜ್ಞಾನ ಸ್ಪರ್ಧೆ: ಬಿ.ವಿಜಯ್‌ (ಶಿವಮೊಗ್ಗ) ರೇಣುಕಾ ಸಜ್ಜನ್‌ (ವಿಜಯಪುರ) ಬಾಳೇಶ್‌ ಶಂಕರ್ (ಚಿಕ್ಕೋಡಿ). ಜನಪದ ಗೀತೆ: ಬೀರಪ್ಪ ಅಣಜಿ (ಹಾವೇರಿ) ಸಿ.ಸೋಮಶೇಖರ್‌ (ತುಮಕೂರು) ಶಿವಲೀಲಾ ಹಾದಿಮನಿ (ಯಾದಗಿರಿ). ಆಶುಭಾಷಣ: ಸಲೀಮ್‌ (ಹಾಸನ) ಅಣ್ಣಪ್ಪ ಯಮನಪ್ಪ (ಚಿಕ್ಕೋಡಿ) ಎಂ.ಎನ್‌.ಮಧುಸೂದನ್‌ (ಮಂಡ್ಯ). ಚಿತ್ರ ಬಿಡಿಸುವ ಸ್ಪರ್ಧೆ: ರಮೇಶ್‌ ಹಂದ ಎನ್‌.ಬಿ.ಪರ್ವತಗೌಡರ್‌ ಜಿ.ಎ.ಚೈತ್ರಾ. ಪ್ರಬಂಧ: ತಿರುಪತೆಪ್ಪ ಕೋಡಿಹಳ್ಳಿ (ಹಾವೇರಿ) ಹುವಪ್ಪ ಸಿ.ಗರಗದ (ಬೆಳಗಾವಿ) ಬಿ.ಎಚ್‌.ವಿಜಯ್‌ಕುಮಾರ್‌ (ತುಮಕೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.